ಮಂಡ್ಯ: ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ಆದೇಶದ ಬೆನ್ನಲ್ಲೇ ಸಕ್ಕರೆ ನಗರಿ ಮಂಡ್ಯದಲ್ಲಿ ಅನ್ನದಾತರನ್ನ ಕೆರಳುವಂತೆ ಮಾಡಿದೆ. ದಿನದಿಂದ ದಿನಕ್ಕೆ ಮಂಡ್ಯದಲ್ಲಿ ಕಾವೇರಿ ಕಿಚ್ಚು ಜೋರಾಗಿದ್ದು, ಸೋಮವಾರ ರೈತರ ಹೋರಾಟಕ್ಕೆ ಕಮಲಪಡೆ ಹಾಗೂ ಚಿತ್ರನಟರು ಸಾಥ್ ನೀಡಿದ್ರು. ಹೋರಾಟದ ಕಾವು ಉಗ್ರ ಸ್ವರೂಪ ಪಡೆದಿತ್ತು.
ಹೌದು, ಸಕ್ಕರೆನಗರಿ ಮಂಡ್ಯದಲ್ಲಿ ಕಾವೇರಿ ಕಿಚ್ಚು ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದ್ದು, ಇವತ್ತು ರೈತರ ಹೋರಾಟಕ್ಕೆ ಕಮಲಪಡೆ ಸಾಥ್ ನೀಡಿತ್ತು. ಮಂಡ್ಯ ಜಿಲ್ಲಾ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಪ್ರತಿಭಟನೆಗೆ ಬಿಜೆಪಿ ನಾಯಕರು ಸಾಥ್ ನೀಡಿದ್ರು. ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದ್ರು.
ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಕಾರ್ಯಕರ್ತರು ಚಡ್ಡಿ ಚಳವಳಿ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ರು. ಇನ್ನು ಈ ಹೋರಾಟದಲ್ಲಿ ಮಾಜಿ ಸಚಿವ ಡಾ ಸಿ ಎನ್ ಅಶ್ವತ್ಥನಾರಾಯಣ್, ಶಾಸಕ ಬಿ ವೈ ವಿಜಯೇಂದ್ರ ಸಾಥ್ ನೀಡಿದ್ರು. ಮಂಡ್ಯದ ಬಿಜೆಪಿ ಕಚೇರಿಯಿಂದ ಸಂಜಯ ಸರ್ಕಲ್ ಮೂಲಕ ಹಿತರಕ್ಷಣಾ ಸಮಿತಿ ನಡೆಸಿದ ವಿಶ್ವೇಶ್ವರಯ್ಯ ಪ್ರತಿಮೆವರೆಗೂ ಚಡ್ಡಿ ಚಳವಳಿ ನಡೆಸಿ, ರೈತರ ಹೋರಾಟಕ್ಕೆ ಬೆಂಬಲ ನೀಡಿದರು. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು.
ಸಂಕಷ್ಟ ಸೂತ್ರ ಅನಿವಾರ್ಯ- ನಟ ವಿನೋದ್ ರಾಜ್.. ಇನ್ನು ಕಾವೇರಿ ನೀರನ್ನು ಹರಿಸುತ್ತಿರುವುದನ್ನು ವಿರೋಧಿಸಿ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಧರಣಿಗೆ ಇವತ್ತು ಹಿರಿಯನಟಿ ಲೀಲಾವತಿ ಹಾಗೂ ನಟ ವಿನೋದ್ ರಾಜ್ ಕೂಡ ಸಾಥ್ ನೀಡಿದ್ರು. ಅನಾರೋಗ್ಯ, ಇಳಿವಯಸ್ಸಿನಲ್ಲೂ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿ ಬೆಂಬಲ ಸೂಚಿಸಿದ್ರು. ಇನ್ನು ಇದೇ ವೇಳೆ ಮಾತನಾಡಿದ ನಟ ವಿನೋದ್ ರಾಜ್, ಪ್ರತಿ ಬಾರಿ ಕೂಡ ನಮಗೆ ಅನ್ಯಾಯವಾಗುತ್ತಿದೆ. ಸಂಕಷ್ಟಸೂತ್ರ ಅನಿರ್ವಾಯ ಎಂದರು.
ಇನ್ನು ನಾಳೆ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನ ವಿರೋಧಿಸಿ ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ಹಾಗು ಮಳವಳ್ಳಿ ಕೇಂದ್ರಗಳ ಬಂದ್ಗೆ ವಿವಿಧ ಸಂಘಟನೆಗಳು ಕರೆ ನೀಡಿವೆ. ಬೆಳಗ್ಗೆ 8 ರಿಂದ ಸಂಜೆ 6ರ ವರೆಗೂ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲ ಸೇವೆಗಳು ಬಂದ್ ಆಗಲಿವೆ. ಒಟ್ಟಾರೆ ಮಂಡ್ಯದಲ್ಲಿ ಕಾವೇರಿ ಕಿಚ್ಚು ದಿನದಿಂದ ತೀವ್ರ ಸ್ವರೂಪ ಪಡೆಯುತ್ತಿದೆ.
ಬೆಂಗಳೂರು ಬಂದ್ ಬೆಂಬಲಕ್ಕೆ ರೈತ ಹಿತರಕ್ಷಣಾ ಸಮಿತಿ ನಿರ್ಧಾರ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಖಂಡಿಸಿ ಮಂಡ್ಯದಲ್ಲಿ ಪ್ರತಿಭಟನಾ ಧರಣಿ (ಸೆಪ್ಟೆಂಬರ್ 24-2023) ಮುಂದುವರೆದಿತ್ತು. ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ವತಿಯಿಂದ ವಿಶ್ವೇಶ್ವರಯ್ಯ ಪ್ರತಿಮೆ ಮುಂದೆ ಪ್ರತಿಭಟನಾ ಧರಣಿ ನಡೆಸಿದ್ದರು.
ನಿನ್ನೆ ನಡೆದ ಪ್ರತಿಭಟನೆಗೆ ಎಲ್ಲಾ ಕನ್ನಡಪರ ಸಂಘಟನೆಗಳ ಮುಖಂಡರು, ರೈತ ಸಂಘಟನೆಗಳು ಸಾಥ್ ನೀಡಿದರು. ಪ್ರತಿಭಟನಾ ಧರಣಿಯಲ್ಲಿ ಮಾಜಿ ಪರಿಷತ್ ಸದಸ್ಯ ಕೆ ಟಿ ಶ್ರೀಕಂಠೇಗೌಡ, ಸುನಂದಾ ಜಯರಾಂ, ಮಾಜಿ ಶಾಸಕ ಜಿ ಬಿ ಶಿವಕುಮಾರ್, ಕನ್ನಡ ಸೇನೆ ಮಂಜು ಸೇರಿದಂತೆ ಹಲವರು ಭಾಗಿಯಾಗಿದ್ದರು. ಸೆಪ್ಟೆಂಬರ್ 26 ಬೆಂಗಳೂರು ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ರೈತ ಹಿತರಕ್ಷಣಾ ಸಮಿತಿ ಮಹತ್ವದ ಸಭೆ ನಡೆಸಿತು. ಮಂಗಳವಾರ ಹೋರಾಟದ ಸ್ವರೂಪದ ಬಗ್ಗೆ ಚರ್ಚೆ ನಡೆಸಿದರು.
ಇದನ್ನೂ ಓದಿ: ಮಂಡ್ಯ: ಬೆಂಗಳೂರು ಬಂದ್ ಬೆಂಬಲಕ್ಕೆ ರೈತ ಹಿತರಕ್ಷಣಾ ಸಮಿತಿ ನಿರ್ಧಾರ