ಮಂಡ್ಯ : ಸಹಾಯಕ ಕೃಷಿ ನಿರ್ದೇಶಕರಿಂದ ರಾಜಭವನಕ್ಕೆ ದೂರು ವಿಚಾರ ಹಿನ್ನೆಲೆಯಲ್ಲಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಅಶೋಕ್ ಕುಮಾರ್ ಪ್ರತಿಕ್ರಿಯಿಸಿ, "ನಮ್ಮ ಜಿಲ್ಲೆಯ ಅಧಿಕಾರಿಗಳಿಂದ ರಾಜಭವನಕ್ಕೆ ಯಾವುದೇ ದೂರು ಹೋಗಿಲ್ಲ. ನಾನು ಈಗಾಗಲೇ ಸಹಾಯಕ ನಿರ್ದೇಶಕರನ್ನು ಗೂಗಲ್ ಮೀಟ್ ಮೂಲಕ ಸಂಪರ್ಕಿಸಿದ್ದೇನೆ. ಯಾವುದೇ ಪತ್ರ ಬರೆದಿಲ್ಲ" ಎಂದರು.
"ಕೃಷಿ ಇಲಾಖೆಯು ಸಿಬ್ಬಂದಿ ಕೊರತೆಯ ನಡುವೆ ರೈತರ ಕಷ್ಟ, ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಇಲಾಖೆಯ ಯಾವುದೇ ಅಧಿಕಾರಿಯೂ ದೂರು ಕೊಟ್ಟಿಲ್ಲ. ರೈತರ ಮತ್ತು ಅಧಿಕಾರಗಳ ನೈತಿಕತೆಯ ದೃಷ್ಟಿಯಿಂದ ಇಂತಹ ವರದಿಗಳನ್ನು ಮಾಧ್ಯಮಗಳಲ್ಲಿ ತೋರಿಸುವುದು ಒಳ್ಳೆಯದಲ್ಲ. ಗೂಗಲ್ ಮೀಟ್‌ನಲ್ಲಿಯೂ ಕೂಡಾ ಅಧಿಕಾರಿಗಳು ನಾವು ದೂರು ನೀಡಿಲ್ಲ, ನಮಗೆ ಈ ಬಗ್ಗೆ ಗೊತ್ತಿಲ್ಲ ಎಂದು ಹೇಳಿದರು. ಅವರಿಗೂ ಕೂಡಾ ಮಾಧ್ಯಮಗಳಲ್ಲಿ ವರದಿಗಳನ್ನು ನೋಡಿದ ಮೇಲೆಯೇ ಈ ಸಂಗತಿ ಗೊತ್ತಾಗಿದೆ. ಎಎಸ್ಪಿ ಮೂಲಕ ತನಿಖೆ ಮಾಡಲಾಗುತ್ತಿದೆ" ಎಂದು ತಿಳಿಸಿದರು.
ಸಚಿವರ ಸ್ಪಷ್ಟನೆ: ಕೃಷಿ ಇಲಾಖೆಯಲ್ಲಿ ವರ್ಗಾವಣೆಗೆ ಲಂಚ ನೀಡಲು ಒತ್ತಾಯಿಸಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ವರದಿ ಸತ್ಯಕ್ಕೆ ದೂರವಾಗಿದೆ ಎಂದು ಕೃಷಿ ಇಲಾಖೆ ಸಚಿವ ಚಲುವರಾಯಸ್ವಾಮಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ನಮ್ಮ ಸರ್ಕಾರದ ಜನಪರ ಆಡಳಿತಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಇಂತಹ ಪ್ರಯತ್ನ ನಡೆಯುತ್ತಿದೆ. ಇದು ಹತಾಶ ಮನೋಭಾವ. ರಾಜ್ಯಪಾಲರಿಗೆ ಅಧಿಕಾರಿಗಳ ಹೆಸರಿನಲ್ಲಿ ನಕಲಿ ದೂರುಪತ್ರ ಸೃಷ್ಟಿ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ, ದೂರಿನ ಬಗ್ಗೆ ಮುಖ್ಯ ಕಾರ್ಯದರ್ಶಿಯವರ ಮೂಲಕ ತನಿಖೆ ಮಾಡಿ ವರದಿ ಪಡೆಯುವಂತೆ ಮುಖ್ಯಮಂತ್ರಿಗಳನ್ನು ಸಚಿವರು ಒತ್ತಾಯಿಸಿದ್ದಾರೆ.
ಪತ್ರವೇನು? : "ಕೃಷಿ ಸಚಿವರು ಲಂಚಕ್ಕಾಗಿ ಪೀಡಿಸುತ್ತಿದ್ದಾರೆ. ತಲಾ 6 ರಿಂದ 8 ಲಕ್ಷ ರೂಪಾಯಿ ಬೇಡಿಕೆ ಇಡಲಾಗಿದೆ. ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಮೂಲಕ ಒತ್ತಡ ಹೇರಲಾಗುತ್ತಿದೆ" ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ : ಲಂಚದ ಆರೋಪ ಕುರಿತು ರಾಜ್ಯಪಾಲರಿಗೆ ದೂರು.. ಕೃಷಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ