ಮಂಡ್ಯ: ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ನಾರಾಯಣಗೌಡರ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಜೆಡಿಎಸ್ಗೆ ಮೋಸ ಎಸಗಿರುವ ಶಾಸಕರ ರಾಜೀನಾಮೆಯನ್ನು ಕೂಡಲೇ ಅಂಗೀಕರಿಸಬೇಕು ಎಂದು ಆಗ್ರಹಿಸಿದ್ದಾರೆ.
ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಒತ್ತಾಯಿಸಿ ಕೆ.ಆರ್.ಪೇಟೆ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಅಣಕು ಶವಯಾತ್ರೆ ನಡೆಸಿದರು. ಬಳಿಕ ಚನ್ನರಾಯಪಟ್ಟಣ ಹಾಗೂ ಮೈಸೂರು ಹೆದ್ದಾರಿಯ ಐಬಿ ವೃತ್ತದಲ್ಲಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ತಹಸೀಲ್ದಾರ್ ಮೂಲಕ ವಿಧಾನಸಭಾ ಸ್ಪೀಕರ್ಗೆ ಮನವಿ ಪತ್ರ ಸಲ್ಲಿಸಿದರು.
ಇದೇ ಮೊದಲ ಬಾರಿಗೆ ಕ್ಷೇತ್ರದಲ್ಲಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಶಾಸಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಇದಕ್ಕೂ ಮೊದಲು ಕೆಲವು ಮುಖಂಡರು ಶಾಸಕರ ವಿರುದ್ಧ ಧ‍್ವನಿ ಎತ್ತಿದ್ದರು. ಇಂದು ಕಾರ್ಯಕರ್ತರು ಸಭೆ ಮಾಡಿ, ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ಶಾಸಕರ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.