ಮಂಡ್ಯ: ಅಧಿಕಾರಿಗಳ ಹಾಗೂ ಗಣಿ ಮಾಲೀಕರ ನಡುವೆ ನಡೆಯುತ್ತಿರುವ ಕಣ್ಣಾಮುಚ್ಚಾಲೆ ಆಟದಲ್ಲಿ ರೈತರು ಬಡವಾಗಿದ್ದಾರೆ. ಸರ್ಕಾರ ಹಾಗೂ ಜಿಲ್ಲಾಡಳಿತ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆಗೆ ನಿಷೇಧ ಏರಿದೆ. ಆದರೂ, ಅಲ್ಲಿ ಕದ್ದುಮುಚ್ಚಿ ಗಣಿಗಾರಿಕೆ ನಡೆಸಲಾಗುತ್ತಿದೆ. ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ಸುತ್ತಮುತ್ತಲಿನ ಗ್ರಾಮಸ್ಥರು ಇದಕ್ಕೆ ಸಾಕ್ಷಿ ಸಮೇತ ಒದಗಿಸಿದ್ದರೂ, ಅಲ್ಲಿ ಏನೂ ನಡೆಯುತ್ತಿಲ್ಲ ಎನ್ನುತ್ತಿದ್ದಾರೆ ಸ್ಥಳೀಯ ಅಧಿಕಾರಿಗಳು.
ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಅವರು ಇಂದು ಗಣಿಗಾರಿಕೆ ಜಾಗಕ್ಕೆ ಭೇಟಿ ನೀಡಿದರು. ಡಿಸಿ ಇಡೀ ಬೇಬಿ ಬೆಟ್ಟವನ್ನು ಪ್ರದಕ್ಷಿಣೆ ಹಾಕಿದರೂ ಒಂದೇ ಒಂದು ಗಣಿಯೂ ನಡೆಯುತ್ತಿರಲಿಲ್ಲ. ಆದರೆ, ರೈತರು ಒದಗಿಸುತ್ತಿರುವ ವಿಡಿಯೋನೇ ಬೇರೆ ಹೇಳುತ್ತಿದೆ. ರಾತ್ರಿ ವೇಳೆ ಸ್ಫೋಟಕಗಳ ಸಿಡಿತ ಭಯಗೊಳಿಸಿದೆ. ಬೆಳಗ್ಗೆಯೇ ಲಾರಿಗಳ ಸಂಚಾರ ನಿದ್ದೆಯನ್ನು ಹಾಳುಗೆಡವುತ್ತಿದೆ.
ಗಣಿ ಮಾಲೀಕರ ಜೀವ ಭಯಕ್ಕೆ ಭಯಗೊಂಡಿರುವ ರೈತರು ಯಾರೂ ಮಾಧ್ಯಮಗಳ ಮುಂದೆ ಬರುತ್ತಿಲ್ಲ. ಆದರೆ, ಅಕ್ರಮದ ಬಗ್ಗೆ ವಿಡಿಯೋ ಸಮೇತ ಸಾಕ್ಷಿ ಒದಗಿಸಿದ್ದಾರೆ. ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಪಾಂಡವಪುರ ಉಪ ವಿಭಾಗಾಧಿಕಾರಿ, ಪಾಂಡವಪುರ ಸಿಪಿಐ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಕಂಡೂ ಕಾಣದಂತೆ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಡಿಸಿ ಬಂದ ತಕ್ಷಣ ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಯೂ ಕಾಡತೊಡಗಿದೆ. ಇದಕ್ಕೆ ಅಧಿಕಾರಿಗಳೇ ಉತ್ತರ ನೀಡಬೇಕಾಗಿದೆ.
ಈಗಾಗಲೇ ಸ್ಥಳೀಯರು ತಮಗಾಗುತ್ತಿರುವ ತೊಂದರೆ ಕುರಿತು ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಚೆಕ್ಪೋಸ್ಟ್ ಇಲ್ಲ, ತಪಾಸಣೆಯೂ ಇಲ್ಲ. ಬಿಜೆಪಿಯ ಪ್ರಭಾವಿ ರಾಜಕಾರಣಿಯೊಬ್ಬರ ಶ್ರೀರಕ್ಷೆ ಈ ಅಕ್ರಮಕ್ಕೆ ಇದೆ ಎಂಬ ಮಾತುಗಳು ಕೇಳಿ ಬಂದಿವೆ.