ಮಂಡ್ಯ: ಬಿಜೆಪಿಯವರಂತಹ ಜಾತಿವಾದಿಗಳು ಇನ್ಯಾರೂ ಇಲ್ಲ. ನನಗೆ ಆ ಜಾತಿ ಕಂಡರೆ ಆಗಲ್ಲ, ಈ ಜಾತಿ ಕಂಡರೆ ಆಗಲ್ಲ ಎಂದು ಹೇಳಿ ಜನರನ್ನ ಎತ್ತಿಕಟ್ಟಿ, ನನ್ನ ಹೇಳಿಕೆಯನ್ನು ತಿರುಚಿ ಪ್ರತಿಭಟನೆ ಮಾಡಿಸಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ನಗರದಲ್ಲಿ ಕುರುಬರ ಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಾನಗಲ್ ಕಾರ್ಯಕ್ರಮದಲ್ಲಿ ನಾನು ಸಂವಿಧಾನ ಬದಲಾವಣೆ ಮಾಡ್ತೀವಿ ಅಂದವರ ಪಕ್ಷಕ್ಕೆ ಹಲವರು ಹಿಂದುಳಿದ ನಾಯಕರು ತಮ್ಮ ಸ್ವಾರ್ಥಕ್ಕಾಗಿ ಹೋಗ್ತಿದ್ದಾರೆ ಎಂದು ನಾನು ಭಾಷಣ ಮಾಡಿದ್ದೆ. ಬಿಜೆಪಿಗೆ ಕೆಲ ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗುತ್ತಿದ್ದಾರೆ ಎಂದು ಹೇಳಿದ್ದೇನೆಂದು ತಿರುಚಿ ನನ್ನ ವಿರುದ್ಧ ಪ್ರತಿಭಟನೆ ಮಾಡಿಸಿದರು ಎಂದು ಸಿದ್ದರಾಮಯ್ಯ ತಿಳಿಸಿದರು.
ಬಿಜೆಪಿ ಬಗ್ಗೆ ಹುಷಾರಾಗಿರಿ:
ನಾನು 5 ವರ್ಷ ಸಿಎಂ ಆಗಿದ್ದೇ ಅನ್ನೋ ಹೊಟ್ಟೆ ಉರಿಯಿಂದ ಹಾಗೆ ಹೇಳ್ತಾರೆ. ದೇವರಾಜ ಅರಸು ನಂತರ ನಾನು ಮಾತ್ರ 5 ಪೂರ್ಣಾವಧಿ ಸಿಎಂ ಆಗಿದ್ದವನು. ಈ ಹೊಟ್ಟೆಯುರಿಯಿಂದ ಸಿದ್ದರಾಮಯ್ಯ ಅವರಿಗೆ ಆ ಜಾತಿ ಕಂಡರೆ ಆಗಲ್ಲ, ಈ ಜಾತಿ ಕಂಡರೆ ಆಗಲ್ಲ ಎಂದು ಹಬ್ಬಿಸುತ್ತಿದ್ದಾರೆ. ಅವರಂತಹ ಕೊಳಕರು, ಜಾತಿವಾದಿಗಳು ಇನ್ಯಾರೂ ಇಲ್ಲ. ನೀವು ಅವರ ಬಗ್ಗೆ ಹುಷಾರಾಗಿರಿ ಎಂದು ಕಿವಿಮಾತು ಹೇಳಿದರು.
ನನ್ನ ಫ್ಲೆಕ್ಸ್ ಸುಟ್ಟಿದ ತಕ್ಷಣ ನಾನು ಸುಟ್ಟೋಗಲ್ಲ: ನನ್ನ ಹೇಳಿಕೆಯನ್ನು ತಿರುಚಿ ಪ್ರತಿಭಟನೆ ಮಾಡಿಸಿದರು. ನನ್ನ ಫ್ಲೆಕ್ಸ್ ಸುಟ್ಟುಹಾಕಿದರು. ಆದರೆ ನನ್ನ ಫ್ಲೆಕ್ಸ್ ಸುಟ್ಟ ತಕ್ಷಣ ನಾನು ಸುಟ್ಟೋಗಲ್ಲ. ನನ್ನ ಜನ, ನನ್ನ ಪ್ರೀತಿಸುವವರು ಸುಟ್ಟೋಗಲ್ಲ. ಎಲ್ಲರೂ ಸಮಾನವಾಗಿರಬೇಕು. ಜಾತಿ ವ್ಯವಸ್ಥೆ ಸಮಾಜದಿಂದ ದೂರವಾಗಬೇಕು. ಮನುಷ್ಯರಾಗಿ, ಸಮಾನರಾಗಿ ಬದುಕುವಂತಾಗಬೇಕು. ಆದ್ರೆ ಬಹಳ ಜನ ಬುದ್ಧಿ ಹೀನರು ಟೀಕೆ ಮಾಡ್ತಾರೆ ಎಂದರು. ನಾನು ಕೊಟ್ಟ ಯೋಜನೆಗಳು ಒಂದು ಜಾತಿಗೆ ಸೀಮಿತವಾಗಿಲ್ಲ:
ಕೆಲವು ಬುದ್ಧಿ ಹೀನರು ಸಿದ್ದರಾಮಯ್ಯ ಈ ಸಮಾಜಕ್ಕೆ ಏನು ಕೊಟ್ಟ ಅಂತಾ ಕೇಳ್ತಾರೆ. ಒಂದು ಜಾತಿಯಲ್ಲಿ ಮಾತ್ರ ಬಡವ, ಶ್ರೀಮಂತ ಇಲ್ಲ. ಎಲ್ಲಾ ಜಾತಿಯಲ್ಲೂ ಬಡವರಿದ್ದಾರೆ. ಹೀಗಾಗಿ ಎಲ್ಲಾ ಜಾತಿಯ ಬಡವರ ಅಭಿವೃದ್ಧಿ ಆಗಬೇಕು. ನಾನು ಕೊಟ್ಟ ಯೋಜನೆಗಳು ಒಂದು ಜಾತಿಗೆ ಸೀಮಿತವಾಗಿಲ್ಲ. ಅವಕಾಶದಿಂದ ವಂಚಿತರಾದವರ ಪರ ನಾನು ಕೆಲಸ ಮಾಡಿದ್ದೇನೆ. ಆದರೂ ಸಿದ್ದರಾಮಯ್ಯ ಜಾತಿ ಮಾಡ್ತಾನೆ ಅಂತಾರೆ ಎಂದು ಬೇಸರ ಹೊರಹಾಕಿದರು.
ಕಾಂಗ್ರೆಸ್ಗೆ ಮತ ನೀಡುವಂತೆ ಸಿದ್ದು ಮನವಿ: ರಾಜಕೀಯ ಮೀಸಲಾತಿ ಕೊಟ್ಟಿದ್ದು ನಾವು. 1994ರಲ್ಲಿ ರಾಜಕೀಯ ಮೀಸಲಾತಿ ಕೊಟ್ಟೆವು. ಹಾಗಾಗಿ ಇವತ್ತು ಬಿಸಿಎಂ-ಎ, ಬಿ ಮೀಸಲಾತಿಯಿಂದ ಹಲವರು ಗೆದ್ದಿದ್ದಾರೆ. ನಾವು ಕೊಟ್ಟ ಮೀಸಲಾತಿ ವಿರುದ್ಧ ಬಿಜೆಪಿಯವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಅವರ ಮನವಿ ವಿರುದ್ಧ ತೀರ್ಪು ಕೊಟ್ಟು ನಮ್ಮ ಆದೇಶವನ್ನ ಎತ್ತಿ ಹಿಡಿಯಿತು ಎಂದು ಸಿದ್ದರಾಮಯ್ಯ ಹೇಳಿದ್ರು. ಕಾಂಗ್ರೆಸ್ ಅಭ್ಯರ್ಥಿಗಳನ್ನ ಗೆಲ್ಲಿಸಿ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು, ಬಡವರ ಪರ ಯೋಜನೆ ಬೇಕು ಅಂದ್ರೆ ಎಲ್ಲರೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ ಎಂದು ಮನವಿ ಮಾಡಿದರು.