ಮಂಡ್ಯ: ತಾಲೂಕಿನ ಸಾತನೂರು ಗ್ರಾಮದ ಹೊರವಲಯದ ಬೆಟ್ಟದಲ್ಲಿ ಶ್ರೀ ಕಂಬದ ನರಸಿಂಹಸ್ವಾಮಿ ನೆಲೆಸಿದ್ದಾನೆ. ಮಾಂಡವ್ಯ ಋುಷಿಗಳ ತಪೋಭೂಮಿಯಾದ ಇಲ್ಲಿ ಶಿಲಾಮೂರ್ತಿ ಪ್ರತಿಷ್ಠಾಪನೆಯ ಹಿಂದೆ ದೊಡ್ಡ ಇತಿಹಾಸವಿದೆ.
ಹಿಂದೆ ಕಂಬದ ನರಸಿಂಹನ ಶಿಲಾಮೂರ್ತಿ ಪ್ರತಿಷ್ಠಾಪಿದ ಮೇಲೆ ಆ ಶಿಲೆ ಬೆಳೆಯುತ್ತಲೇ ಇತ್ತು. ಒಂದು ದಿನ ಕಂಬದ ನರಸಿಂಹ ಋಷಿಗಳ ಕನಸಿನಲ್ಲಿ ಬಂದು ನಾನು ಬೆಳೆಯುವುದು ನಿಲ್ಲ ಬೇಕಾದರೆ ನನ್ನನ್ನು ಭಗ್ನಗೊಳಿಸಿ ಕಂಬದ ನೆತ್ತಿಯ ಮೇಲೆ ಪಂಚಲೋಹದ ಮೊಳೆ ಹೊಡೆಯಿರಿ ಎಂದು ತಿಳಿಸುತ್ತಾನೆ. ಋಷಿಗಳು ವಿಶ್ವಕರ್ಮದವರನ್ನು ಕರೆಸಿ ನೆತ್ತಿಯ ಮೇಲೆ ಮೊಳೆ ಹೊಡೆಸಿದ ನಂತರ ಬೆಳವಣಿಗೆ ನಿಂತಿತೆಂಬ ಪ್ರತೀತಿಯಿದೆ.
ನಂತರ ಗುಡಿ ಕಟ್ಟಿದ ಖಷಿಗಳು ಗೋಪುರ ನಿರ್ಮಿಸುತ್ತಾರೆ. ಈ ವೇಳೆ ಗೋಪುರ ಬಿರುಕು ಬಿಡುತ್ತದೆಯಂತೆ. ಕೆಲಸ ಮಾಡಿಸಿದವನಿಗೆ ಹುಟ್ಟಿದ ಮಗುವಿನ ತಲೆಯೂ ಅರ್ಧಮಟ್ಟದಲ್ಲಿತ್ತು. ಕೂಡಲೇ ಆತ ತನ್ನ ತಪ್ಪು ಒಪ್ಪಿಕೊಂಡು ನರಸಿಂಹದೇವರಿಗೆ ತಪ್ಪುಕಾಣಿಕೆ ಸಲ್ಲಿಸಿದರು ಎಂಬುದು ಇಲ್ಲಿನ ಇತಿಹಾಸ ಎನ್ನುತ್ತಾರೆ ಆರ್ಚಕರು.
ಮಡಿ ಮೈಲಿಗೆ ವಿಚಾರದಲ್ಲಿ ಕಟ್ಟುನಿಟ್ಟಿನ ಪದ್ಧತಿ ಇಲ್ಲಿದೆ. ಯಾವುದೇ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಪೂಜೆ, ಉತ್ಸವಾದಿಗಳಲ್ಲಿ ಮೈಲಿಗೆ, ಅಪಚಾರವಾದರೆ ನರಸಿಂಹ ದೇವರು ಆವಾಸಸ್ಥಾನ ಬಿಟ್ಟು ಲೋಕಪಾವನಿ ನದಿ ತಟದ ಕರಿಘಟ್ಟಕ್ಕೆ ಹೋಗಿಬಿಡುತ್ತಾನೆಂಬ ನಂಬಿಕೆ ಈಗಲೂ ಇದೆ. ಹಾಗೆಯೇ ದೇವರು ಇಲ್ಲಿಂದ ತೆರಳುವ ಮುನ್ನ ರಾತ್ರಿ ಗುಂಡಿನ ಶಬ್ದ ಕೇಳಿಬರುತ್ತದೆ. ಆಗ ಊರ ಹಿರಿಯರು, ದೇವರು ಕರಿಘಟ್ಟಕ್ಕೆ ತೆರಳಿದೆ ಎಂದು ನಂಬುತ್ತಾರೆ. ಮತ್ತೆ ಆ ದೇವರನ್ನು ಒಲಿಸಿ ಕರೆತರುವ ಸಂಪ್ರದಾಯವೇ ರೋಮಾಂಚನಕಾರಿ.
ಕರಿಘಟ್ಟಕ್ಕೆ ಹೋಗಿರುವ ದೇವರನ್ನು ಮತ್ತೆ ಗುಡಿಗೆ ಕರೆತರಲು ಸುತ್ತಮುತ್ತಲ ಗ್ರಾಮಸ್ಥರು ಸಭೆ ಸೇರಿ ಪುಣ್ಯಾಃಶುದ್ಧಿ ಕಾರ್ಯಗಳನ್ನು ನೆರವೇರಿಸುತ್ತಾರೆ. ಪ್ರತೀ ವರ್ಷ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಗಳು ಜರುಗುತ್ತವೆ. ಗೋಕುಲಾಷ್ಟಮಿ, ಶ್ರಾವಣ ಮಾಸದಲ್ಲಿ ಹಾಗೂ ಶನಿವಾರ, ಮಂಗಳವಾರಗಳಂದು ನಡೆಯುವ ಪೂಜಾ ಕಾರ್ಯಕ್ರಮಗಳು ವಿಶೇಷವಾಗಿವೆ.