ಮಂಡ್ಯ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಹೋರಾಟ ಇದೀಗ ಮತ್ತೊಂದು ಆಯಾಮ ಪಡೆದುಕೊಂಡಿದೆ. ಇದುವರೆಗೆ ಮಸೀದಿ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದ ಹಿಂದೂ ಕಾರ್ಯಕರ್ತರು ಇದೀಗ ಪೊಲೀಸರ ವಿರುದ್ಧವೇ ಹೋರಾಟಕ್ಕೆ ಮುಂದಾಗಿದ್ದಾರೆ. ಹಿಂದೂ ಕಾರ್ಯಕರ್ತನಿಗೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ರಾತ್ರಿಯಿಡೀ ಮಸೀದಿ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.
ಕಳೆದ ಭಾನುವಾರ ಸಾವಿರಾರು ಹಿಂದೂ ಕಾರ್ಯಕರ್ತರು ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯು ಹಿಂದೂಗಳ ಮಂದಿರ ಎಂದು ಸಂಕೀರ್ತನಾ ಯಾತ್ರೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು. ನಿಮಿಷಾಂಭ ದೇವಸ್ಥಾನದಿಂದ ರಂಗನಾಥಸ್ವಾಮಿ ದೇವಾಲಯದವರೆಗೆ ನಡೆದ ಸಂಕೀರ್ತನಾ ಯಾತ್ರೆಯ ಮೆರವಣಿಗೆಯಲ್ಲಿ ಗಂಜಾಂ ಗ್ರಾಮದಲ್ಲಿ ಹಿಂದೂ ಕಾರ್ಯಕರ್ತನೋರ್ವ ಬಾಳೆದಿಂಡನ್ನು ಅನ್ಯಕೋಮಿನವರ ಮನೆಯ ಮೇಲೆ ಎಸೆದಿದ್ದ. ಇದು ಈಗ ವಿವಾದಕ್ಕೆ ಕಾರಣವಾಗಿತ್ತು.
ಪಾಂಡವಪುರ ಮೂಲದ ಶಶಾಂಕ್ ಎಂಬಾತ ಬಾಳೆದಿಂಡನ್ನು ಎಸೆದಿದ್ದು, ಸಿಸಿಟಿವಿ ದೃಶ್ಯ ಆಧರಿಸಿ ಶ್ರೀರಂಗಪಟ್ಟಣ ಪೊಲೀಸರು ಶಶಾಂಕ್‌ನನ್ನು ಬಂಧಿಸಿ ಠಾಣೆಗೆ ಕರೆತಂದಿದ್ದಾರೆ. ಈ ವೇಳೆ ಪೊಲೀಸರು ಆರೋಪಿಗೆ ಬೆದರಿಸಿದ್ದಾರೆ ಎನ್ನಲಾಗಿದೆ. ಬೆದರಿಕೆ ಹಾಕಿರುವ ಪೊಲೀಸ್ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡುವುದರ ಜೊತೆಗೆ ಆತನ ಮೇಲೆ ಎಫ್‌ಐಆರ್ ದಾಖಲು ಮಾಡಬೇಕೆಂದು ಹಿಂದೂ ಕಾರ್ಯಕರ್ತರು ಪಟ್ಟು ಹಿಡಿದು ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ಮಸೀದಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ಇದನ್ನೂ ಓದಿ: ಶ್ರೀರಂಗಪಟ್ಟಣ ಚಲೋಗೆ ತಡೆ: ಬನ್ನಿಮಂಟಪದಲ್ಲಿ ಹಿಂದೂ ಕಾರ್ಯಕರ್ತರಿಂದ ಭಜನೆ
ಈ ವೇಳೆ ಪ್ರತಿಭಟನಾನಿರತ ಕಾರ್ಯಕರ್ತರನ್ನು ಮನವೊಲಿಸುವ ಕೆಲಸಕ್ಕೆ ಎಸ್ಪಿ ಯತೀಶ್ ಮುಂದಾದ್ರು. ಆದ್ರೆ, ಹಿಂದೂ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ ಪೊಲೀಸ್ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಿ ಆತನ ಮೇಲೆ ಎಫ್‌ಐಆರ್ ದಾಖಲು ಮಾಡುವವರೆಗೂ ನಾವು ಪ್ರತಿಭಟನೆ ಕೈ ಬಿಡಲ್ಲ ಎಂದು ಪಟ್ಟು ಹಿಡಿದು ಮಳೆಯಲ್ಲೇ ಪ್ರತಿಭಟನೆ ಮುಂದುವರೆಸಿದರು. ಬಳಿಕ ಕಾರ್ಯಕರ್ತರ ದೂರಿನನ್ವಯ ಎಫ್‌ಐಆರ್ ದಾಖಲು ಮಾಡಲಾಗಿದೆ. ದೂರು ದಾಖಲಾದ ಹಿನ್ನೆಲೆ ಹಿಂದೂ ಸಂಘಟನೆಗಳು ಪ್ರತಿಭಟನೆ ಕೈ ಬಿಟ್ಟಿವೆ.
ಇದನ್ನೂ ಓದಿ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ: ಹೈಕೋರ್ಟ್ಗೆ ದಾವೆ ಹೂಡಿಲು ಸಜ್ಜಾದ ಸಂಘಟನೆಗಳು