ಮಂಡ್ಯ: ಜಿಲ್ಲೆಯಾದ್ಯಂತ ನಿರಂತರ ಮಳೆ ಹಿನ್ನೆಲೆ ಜನಜೀವನ ಅಸ್ತವ್ಯಸ್ತವಾಗಿದೆ. ಹಲವು ಗ್ರಾಮಗಳು ಸಂಪರ್ಕ ಕಡಿತಗೊಂಡಿವೆ. ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಗ್ರಾಮದಲ್ಲಿ ಕೆರೆ ಕೋಡಿ ಒಡೆದು ರೈತರ ಜಮೀನುಗಳಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಗಳು ಹಾನಿಯಾಗಿವೆ. ನಾಗಮಂಗಲ ತಾಲೂಕಿನ ಗದ್ದೆ ಭುವನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿದೆ. ಸರ್ಕಾರಿ ಶಾಲೆ ಹಾಗೂ ಗ್ರಾಮದ ಹಲೆವೆಡೆ ನೀರು ನುಗ್ಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಕೆ ಆರ್ ಪೇಟೆ ತಾಲೂಕಿನ ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಸೊಳ್ಳೆಪುರ ಕಿಕ್ಕೇರಿ ಗ್ರಾಮದ ಕೆರೆ ತುಂಬಿ ಹರಿಯುತ್ತಿದ್ದು, ಎರಡೂ ಗ್ರಾಮಕ್ಕೂ ಸಂಪರ್ಕ ಕಡಿತಗೊಂಡಿದೆ. ಈ ಹಿನ್ನೆಲೆ ಕೆ ಆರ್ ಪೇಟೆಯ ಹಲವು ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಶ್ರೀರಂಗಪಟ್ಟಣದ ಚಂದ್ರಗಿರಿ, ಕೊಪ್ಪಲ್, ಸಬ್ಬನಕುಪ್ಪೆ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ಮಂಡ್ಯ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ರಸ್ತೆಯನ್ನೇ ಕೊರೆದು ನೀರು ಜಮೀನುಗಳಿಗೆ ನುಗ್ಗಿದ್ದರಿಂದ ಅಪಾರ ಪ್ರಮಾಣದ ಕಬ್ಬು ಬೆಳೆ ನಾಶವಾಗಿದೆ.
ಇದನ್ನೂ ಓದಿ: ತುಮಕೂರು ಜಿಲ್ಲೆಯಲ್ಲಿ ಮಳೆ ಆರ್ಭಟ: ಈವರೆಗೆ ಇಬ್ಬರು ಬಲಿ
ಮಂಡ್ಯದ ಹೊಸಬೂದನೂರು ಬಳಿ ಕೆರೆ ಕೋಡಿ ಒಡೆದಿರುವ ಕಾರಣ, ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿದೆ. ರಸ್ತೆಯ ಮೇಲೆಯೇ ನೀರು ಹರಿಯುತ್ತಿದ್ದು, ಸುತ್ತಮುತ್ತಲಿನ ನೂರಾರು ಎಕರೆ ಜಮೀನು ಜಲಾವೃತಗೊಂಡಿವೆ. ಮೈಸೂರು-ಬೆಂಗಳೂರು ಸಂಚಾರಕ್ಕೆ ಕನಕಪುರ ಹಾಗೂ ನಾಗಮಂಗಲ ರಸ್ತೆಯಲ್ಲಿಯೇ ಸಂಚಾರ ಮಾಡಬೇಕಿದೆ.
ಪರ್ಯಾಯ ಮಾರ್ಗ ವ್ಯವಸ್ಥೆ ಹೀಗಿದೆ..
- ಬೆಂಗಳೂರು-ಮದ್ದೂರು- ಮಳವಳ್ಳಿ ಬನ್ನೂರು ಮೂಲಕ ಒಂದು ಮಾರ್ಗ.
- ಬೆಂಗಳೂರಿನಿಂದ ನೆಲಮಂಗಲ ಬೆಳ್ಳೂರು ಕ್ರಾಸ್- ನಾಗಮಂಗಲ-ಪಾಂಡವಪುರ ಶ್ರೀರಂಗಪಟ್ಟಣ ಮೂಲಕ ಮೈಸೂರು.
- ಮದ್ದೂರಿನಿಂದ ಮಂಡ್ಯಕ್ಕೆ ಬರಬೇಕಾದ್ರೆ ಕೆ.ಎಂ.ದೊಡ್ಡಿ ಮಾರ್ಗ ಬಳಸಬಹುದು.