ಮಂಡ್ಯ: ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ನಗರದ ಬೀಡಿ ಕಾರ್ಮಿಕರ ಕಾಲೋನಿ ಸಂಪೂರ್ಣ ಜಲಾವೃತಗೊಂಡಿದೆ. 400ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಮಳೆ ಅಬ್ಬರಕ್ಕೆ ವಿದ್ಯುತ್ ಕಡಿತಗೊಂಡಿದೆ. ಹೀಗಾಗಿ, ಮನೆಯೊಳಗೆ ನುಗ್ಗಿ ಬರುತ್ತಿದ್ದ ಮಳೆ ನೀರನ್ನು ನಿವಾಸಿಗಳಿಗೆ ತಡೆಯಲಾಗಲಿಲ್ಲ. ಹೀಗಾಗಿ, ಮನೆಯೊಳಗಿನ ದವಸ-ಧಾನ್ಯಗಳು, ಬಟ್ಟೆ-ಬರೆ, ಹಾಸಿಗೆ, ಬೆಡ್‌ಶೀಟ್ ಹೀಗೆ ಅಗತ್ಯ ವಸ್ತುಗಳನ್ನು ಸಂರಕ್ಷಿಸಿಕೊಳ್ಳಲಾಗದೇ ಇಡೀ ರಾತ್ರಿ ನರಕಯಾತನೆ ಅನುಭವಿಸಿದ್ದಾರೆ.
ಮಳೆಯಿಂದ ಚರಂಡಿ, ಒಳಚರಂಡಿ ನೀರೆಲ್ಲವೂ ಮನೆಗಳಿಗೆ ನುಗ್ಗಿದೆ. ಮನೆಯ ಸುತ್ತ, ಹೊರಗೆ, ಎಲ್ಲೆಂದರಲ್ಲಿ ನೀರು ನಿಂತಿದೆ. ನೀರು ಹರಿದುಹೋಗುವುದಕ್ಕೆ ಸರಿಯಾದ ವ್ಯವಸ್ಥೆಗಳಿಲ್ಲ. ಒಳಚರಂಡಿ ಸಂಪೂರ್ಣವಾಗಿ ಅವ್ಯವಸ್ಥೆಯಿಂದ ಕೂಡಿದೆ. ಇದರಿಂದಾಗಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಜಾಗವಿಲ್ಲದೇ, ನಿಂತಲ್ಲೇ ನಿಲ್ಲುವಂತಾಗಿದೆ. ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬೀಡಿ ಕಾರ್ಮಿಕರ ಕಾಲೋನಿ ಅಕ್ಷರಶಃ ಕೆರೆಯಂತೆ ಕಾಣುತ್ತಿದೆ.
ಇದನ್ನೂ ಓದಿ: 'ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ಯೋಗ್ಯತೆ ಕಾಂಗ್ರೆಸ್, ಜೆಡಿಎಸ್ ನಾಯಕರಿಗಿಲ್ಲ'
ಮಳೆ ಬಂದಾಗಲೆಲ್ಲ ನಮ್ಮ ಬದುಕು ಬೀದಿಗೆ ಬರುತ್ತಿದ್ದರೂ ಯಾರೋಬ್ಬರು ನಮ್ಮ ಗೋಳನ್ನು ಕೇಳುತ್ತಿಲ್ಲ ಎಂದು ಇಲ್ಲಿನ ನಿವಾಸಿಯೊಬ್ಬರು ಅಳಲು ವ್ಯಕ್ತಪಡಿಸಿದರು.
13ಕ್ಕೂ ಹೆಚ್ಚು ಮನೆಗಳ ಗೋಡೆಗಳು ಭಾಗಶಃ ಕುಸಿತ:
ಮಂಡ್ಯ ತಾಲೂಕಿನ ಬಲ್ಲೇನಹಳ್ಳಿ, ಚಿಂದಗಿರಿ ಕೊಪ್ಪಲು, ದೊಡ್ಡಪಾಳ್ಯ, ಚಿಕ್ಕಹಾರೋಹಳ್ಳಿ, ನೆಲಮನೆ, ಗರಕಹಳ್ಳಿ ಸೇರಿದಂತೆ ಇತರೆ ತಾಲೂಕಿನಲ್ಲಿ ಸುಮಾರು 50ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿನ ಬೆಳೆಗಳು ನೀರಿನಲ್ಲಿ ಮುಳುಗಡೆಯಾಗಿದೆ. ದೊಡ್ಡಪಾಳ್ಯ, ಎಂ. ಶೆಟ್ಟಹಳ್ಳಿ, ಚಿಂದಗಿರಿ ಕೊಪ್ಪಲು, ಮಂಡ್ಯ ಕೊಪ್ಪಲು ಸೇರಿದಂತೆ ಇತರೆಡೆ ಸೇರಿ 13ಕ್ಕೂ ಹೆಚ್ಚು ಮನೆಗಳ ಗೋಡೆಗಳು ಭಾಗಶಃ ಕುಸಿದು ಬಿದ್ದಿವೆ.
ವಿದ್ಯುತ್ ಕಂಬಗಳು ಸೇರಿದಂತೆ ಭಾರಿ ಗಾತ್ರದ ಮರಗಳು ನೆಲಕ್ಕುರುಳಿವೆ. ಅದೃಷ್ಟವಶಾತ್ ಮಳೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಬೆಳೆ ಹಾನಿ ಹಾಗೂ ನಷ್ಟದ ಪ್ರಮಾಣವನ್ನು ಪರಿಶೀಲಿಸಿದ್ದಾರೆ.
ತಾಲೂಕಿನಾದ್ಯಂತ ಒಟ್ಟು 75 ಮಿ.ಮೀ ಮಳೆಯಾಗಿದ್ದು, ಕಸಬಾ-67 ಮಿ.ಮೀ, ಅರಕೆರೆ-98 ಮಿ.ಮೀ, ಬೆಳಗೊಳ-38 ಮಿ.ಮೀ, ಕೆ. ಶೆಟ್ಟಹಳ್ಳಿ-177 ಮಿ.ಮೀ ಹಾಗೂ ಕೆ. ಶೆಟ್ಟಹಳ್ಳಿ-2 85 ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.