ಮಂಡ್ಯ: ಮೂರು ಡಿಸಿಎಂ ಹುದ್ದೆಯ ಬೇಡಿಕೆ ತಪ್ಪಲ್ಲ ಎಂದು ಮಂಡ್ಯದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದರು. ನಗರದಲ್ಲಿ ಮಾತನಾಡಿದ ಅವರು, ಇದೆಲ್ಲ ನಮ್ಮ ವರಿಷ್ಠರು ತೀರ್ಮಾನ ಮಾಡುವಂಥದ್ದು. ವೈಯಕ್ತಿಕ ಅಭಿಪ್ರಾಯಗಳನ್ನು ನಮ್ಮವರು ಆಗಾಗ್ಗೆ ಹೇಳುತ್ತಿರುತ್ತಾರೆ ಎಂದರು.
ಈ ವಿಚಾರವನ್ನು ಹೈಕಮಾಂಡ್ಗೆ ಬಿಟ್ಟು ಬಿಡೋಣ. ಅದನ್ನು ಅವರೇ ಕೇಳಬೇಕು. ನಾನು ಹೈಕಮಾಂಡ್ ಗಮನಕ್ಕೆ ಈ ವಿಷಯವನ್ನು ತರುವುದಕ್ಕೆ ಆಗಲ್ಲ. ಅವರ ಅಭಿಪ್ರಾಯ ಹೇಳಿದ್ದಾರೆ ತಪ್ಪಲ್ಲ ಎಂದು ಹೇಳಿದರು. ಕಾವೇರಿ ನಿರ್ವಾಹಣಾ ಪ್ರಾಧಿಕಾರದ ಸಭೆ ಬಗ್ಗೆ ಮಾತನಾಡುತ್ತಾ, ಇಂದು ಏನು ತೀರ್ಪು ಬರುತ್ತದೆ ಎಂದು ಕಾದು ನೋಡೋಣ. ತೀರ್ಪು ನಮ್ಮ ಪರವಾಗಿ ಬರಬೇಕೆಂಬುದು ನಮ್ಮ ಆಸೆ. ಅದಕ್ಕೆ ತಕ್ಕಂತೆ ಎಲ್ಲಾ ವಿಷಯಗಳನ್ನೂ ತಿಳಿಸಿದ್ದೇವೆ ಎಂದು ತಿಳಿಸಿದರು.
ಸಂಸತ್ ವಿಶೇಷ ಅಧಿವೇಶನದಲ್ಲಿ ಒನ್ ನೇಷನ್, ಒನ್ ಎಲೆಕ್ಷನ್ ಮಸೂದೆ ಮಂಡನೆ ಕುರಿತ ಪ್ರಶ್ನೆಗೆ, ಅಧಿವೇಶನದಲ್ಲಿ ಏನು ಅಜೆಂಡಾ ತರ್ತಾರೋ ಅದರ ಮೇಲೆ ನಮ್ಮ ಪಕ್ಷ ನಿಲುವನ್ನು ವರಿಷ್ಠರು, ಲೋಕಸಭಾ ಸದಸ್ಯರು ತಿಳಿಸುತ್ತಾರೆ ಎಂದರು. ಕಾವೇರಿ ವಿಚಾರವಾಗಿ ಸರ್ವಪಕ್ಷ ಸಭೆ ಬಗ್ಗೆ ಮಾತನಾಡಿ, ಸರ್ವಪಕ್ಷದ ಸಭೆಯನ್ನು ಮುಖ್ಯಮಂತ್ರಿಗಳು ಕರೆದು ವಿಪಕ್ಷಗಳ ನಾಯಕರಿಗೆ ಎಲ್ಲ ಮಾಹಿತಿಯನ್ನು ಒದಗಿಸಿದ್ದಾರೆ. ನಿಮಗೆ ಸಹಕಾರ ಕೊಡ್ತೇವೆ ಅಂತ ಬಿಜೆಪಿ, ಜೆಡಿಎಸ್ ನಾಯಕರು ತಿಳಿಸಿದ್ದಾರೆ. ಒಳಗಡೆ ಸಂಪೂರ್ಣ ಸಹಕಾರ ಕೊಡ್ತೇವೆ ಅಂತ ಹೇಳಿ ಈಗ ಹೋರಾಟ ಮಾಡ್ತೀವಿ ಅಂದ್ರೆ ಅದಕ್ಕೆ ಅರ್ಥ ಇದೆಯೇ? ವಿರೋಧ ಪಕ್ಷದವರು ಸಂಪೂರ್ಣ ಸಹಕಾರ ಕೊಡಬೇಕು ಎಂದರು.
ನಾಡಿನ ಜನತೆಗೆ ನನ್ನ ಹಾಗೂ ಸರ್ಕಾರದ ಪರವಾಗಿ ಗೌರಿ-ಗಣೇಶ ಹಬ್ಬದ ಶುಭಾಶಯಗಳು. ಈ ಬಾರಿ ಮಳೆ ಅಭಾವದಿಂದ ಬಹಳಷ್ಟು ಸಂಕಷ್ಟಗಳು ಎದುರಾಗಿವೆ. ಗಣಪತಿ ಆ ಎಲ್ಲಾ ಸಂಕಷ್ಟಗಳನ್ನು ನಿವಾರಣೆ ಮಾಡ್ತಾನೆ ಅನ್ನೋ ವಿಶ್ವಾಸವಿದೆ. ಸಂಕಷ್ಟ ದೂರ ಮಾಡಲೆಂದು ಪ್ರಾರ್ಥಿಸುತ್ತೇನೆ ಎಂದು ಡಿಸಿಎಂ ಪರಮೇಶ್ವರ್ ಹೇಳಿದರು.
ಭಾನುವಾರ ಕಲಬುರಗಿಯಲ್ಲಿ ಮೂರು ಜನ ಡಿಸಿಎಂ ಆಗಬೇಕು ಅನ್ನೋ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯೆ ನೀಡಿದ್ದರು. ಈ ವಿಚಾರವಾಗಿ ನಾನು ಹೈಕಮಾಂಡ್ ಆದೇಶ ಪಾಲನೆ ಮಾಡ್ತೇನೆ. ಆಗ ಒಬ್ಬರೇ ಡಿಸಿಎಂ ಸಾಕು ಅಂದಿದ್ರು. ಈಗ ಇವರು ಹೈಕಮಾಂಡ್ದೊಂದಿಗೆ ಚರ್ಚೆ ಮಾಡ್ತೀನಿ ಅಂತಿದ್ದಾರೆ. ಕಡೆಗೆ ಹೈಕಮಾಂಡ್ ಏನು ಹೇಳುತ್ತೋ ಹಾಗೆ ನಡೆದುಕೊಳ್ತೇನೆ ಎಂದಿದ್ದರು.
ಇದನ್ನೂ ಓದಿ: ವಿಶ್ವಕರ್ಮ ಅಧ್ಯಯನ ಕೇಂದ್ರ ಸ್ಥಾಪನೆಗೆ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ