ಮಂಡ್ಯ: ಕೌಟುಂಬಿಕ ಕಲಹಕ್ಕೆ ಬೇಸತ್ತು ತಂದೆ-ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ನಡೆದಿದೆ. ಘಟನೆ ನಾಗಮಂಗಲದ ಲಾಳನಕೆರೆ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದ್ದು, ಇಂದು ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಗ್ರಾಮದ ಗಂಗಾಧರ್ ಗೌಡ(38), ಮಗ ಜಸ್ವಿತ್(07) ಮೃತಪಟ್ಟವರು.
ಪತ್ನಿಯ ಅನೈತಿಕ ಸಂಬಂಧ ಮತ್ತು ಕಿರುಕುಳಕ್ಕೆ ಬೇಸತ್ತಿದ್ದ ಗಂಡ ಮತ್ತು ಮಗ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಗಾಗ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಈ ಹಿಂದೆಯೂ ಗ್ರಾಮಸ್ಥರು ನ್ಯಾಯ ಪಂಚಾಯಿತಿ ಮಾಡಿ ಬುದ್ಧಿ ಹೇಳಿದ್ದರು. ಆದರೆ, ನಿತ್ಯ ಗಂಡ - ಹೆಂಡತಿ ನಡುವೆ ಸಣ್ಣಪುಟ್ಟ ವಿಚಾರಗಳಿಗೆ ಜಗಳ ನಡೆಯುತ್ತಿತ್ತು. ನಿತ್ಯ ಜಗಳದಿಂದ ಬೇಸತ್ತಿದ್ದ ತಂದೆ - ಮಗ ನಿನ್ನೆ ರಾತ್ರಿ ಗ್ರಾಮದ ಹೊರವಲಯದಲ್ಲಿರುವ ಹಳ್ಳಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
![father and son committed suicide at mandya](https://etvbharatimages.akamaized.net/etvbharat/prod-images/14184028_desthnote.jpg)
ನನ್ನ ಮತ್ತು ನನ್ನ ಮಗನ ಸಾವಿಗೆ ನನ್ನ ಹೆಂಡತಿ ಕಾರಣ, ಅವರನ್ನು ಶಿಕ್ಷಿಸಬೇಕು ಎಂದು ಡೆತ್ ನೋಟ್ ಬರೆದಿಟ್ಟು, ಹಗ್ಗದಲ್ಲಿ ಕೈಕಾಲುಗಳನ್ನು ಕಟ್ಟಿಕೊಂಡು ಹಳ್ಳಕ್ಕೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾತ್ರಿಯೇ ಸ್ನೇಹಿತರು ಅವರಿಗಾಗಿ ಹುಡುಕಾಡಿದ್ರೂ ಪತ್ತೆಯಾಗಿರಲಿಲ್ಲ.
ಇದನ್ನೂ ಓದಿ: ಯುವತಿ ಮನೆಯವರ ಮಾನಸಿಕ ಕಿರುಕುಳಕ್ಕೆ ಬೇಸತ್ತು ಯುವಕ ಆತ್ಮಹತ್ಯೆ
ಇಂದು ಬೆಳಗ್ಗೆ ಗ್ರಾಮದ ಹೊರವಲಯದ ಹಳ್ಳದ ಪಕ್ಕದಲ್ಲಿ ಚಪ್ಪಲಿ, ಮೊಬೈಲ್ ಫೋನ್ ಹಾಗೂ ಡೆಟ್ನೋಟು ಪತ್ತೆ ಆದ ಹಿನ್ನೆಲೆ, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪತ್ತೆ ಕಾರ್ಯಾಚರಣೆ ನಡೆಸಿದ್ದಾರೆ. ಬಳಿಕ ತಂದೆ ಮಗನ ಶವ ದೊರಕಿದೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..