ಮಂಡ್ಯ: ಕೊರೊನಾ ಆರ್ಭಟದ ನಡುವೆಯೂ ಜಿಲ್ಲೆಯಲ್ಲಿ 2 ಹಂತದಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಮತದಾನದೊಂದಿಗೆ ಜಿಲ್ಲೆಯಲ್ಲಿ ಗ್ರಾಮ ಸಮರ ಮುಕ್ತಾಯಗೊಂಡಿದ್ದು, ನಾಳೆ ಫಲಿತಾಂಶ ಹೊರಬೀಳಲಿದೆ. ಹೀಗಾಗಿ ತೆರೆಮರೆಯಲ್ಲಿ ಸೋಲು-ಗೆಲುವಿನ ಲೆಕ್ಕಾಚಾರದೊಂದಿಗೆ ಬೆಟ್ಟಿಂಗ್ ಭರಾಟೆ ನಡೆಯುತ್ತಿದೆ ಎನ್ನಲಾಗುತ್ತಿದೆ.
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇ. 3ರಷ್ಟು ಮತದಾನದ ಪ್ರಮಾಣ ಹೆಚ್ಚಾಗಿದೆ. ಊರು ಬಿಟ್ಟು ಬೆಂಗಳೂರು, ಮುಂಬೈ ಹಾಗೂ ಇತರೆಡೆ ನೆಲೆಸಿದ್ದವರು ಕೊರೊನಾ ಲಾಕ್ಡೌನ್ ಬಳಿಕ ತವರು ಗ್ರಾಮಗಳಿಗೆ ವಾಪಸಾಗಿದ್ದರು.
ಹೀಗಾಗಿ ವಿಧಾನಸಭೆ, ಲೋಕಸಭೆ ಚುನಾವಣೆಗಿಂತಲೂ ಹೆಚ್ಚಿನ ಮತದಾನವಾಗಿದ್ದು, ಎರಡೂ ಹಂತಗಳಲ್ಲಿ ಒಟ್ಟು ಶೇ. 87.74ರಷ್ಟು ಮತದಾನ ನಡೆದಿದೆ. 11,61,212 ಮತದಾರರಲ್ಲಿ 10,18,907 ಮಂದಿ ಮತ ಚಲಾಯಿಸಿದ್ದಾರೆ. ಕಳೆದ ಬಾರಿ 11,56,471 ಮತದಾರರಲ್ಲಿ 9,80,045 (ಶೇ. 84.74) ಜನರು ಮತದಾನ ಮಾಡಿದ್ದರು.
ನಾಳೆ ಮತ ಎಣಿಕೆ ನಡೆಯಲಿದ್ದು, ಫಲಿತಾಂಶದ ಬಗ್ಗೆ ತೆರೆಮರೆಯಲ್ಲಿ ಬೆಟ್ಟಿಂಗ್ ಭರಾಟೆ ಶುರುವಾಗಿದೆ. ಬೆಟ್ಟಿಂಗ್ ನಡೆಯುತ್ತಿದೆಯಾದರೂ ನಿರ್ದಿಷ್ಟವಾಗಿ ಯಾವ ಊರಿನಲ್ಲಿ ಯಾವ ಅಭ್ಯರ್ಥಿಗಳ ಪರ-ವಿರುದ್ಧವಾಗಿ ಬೆಟ್ಟಿಂಗ್‌ನಲ್ಲಿ ಏನನ್ನು ಕಟ್ಟಲಾಗಿದೆ ಎಂಬ ಗುಟ್ಟನ್ನು ಯಾರೊಬ್ಬರೂ ಬಿಟ್ಟುಕೊಡುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಬೆಟ್ಟಿಂಗ್ ಬಗ್ಗೆ ಮಾತನಾಡಿದರೆ ತಮ್ಮ ವಿರುದ್ಧ ಪೊಲೀಸರು ಕೇಸು ದಾಖಲಿಸುತ್ತಾರೆ ಎಂಬ ಭಯ ಇದಕ್ಕೆ ಕಾರಣವಾಗಿದೆ.
ಕಳೆದ ಬಾರಿ ಕೇವಲ ಜೆಡಿಎಸ್-ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ನಡುವೆಯೇ ಹೆಚ್ಚು ಫೈಟ್ ನಡೆಯುತ್ತಿತ್ತು. ಆದರೆ ಈ ಚುನಾವಣೆಯಲ್ಲಿ ಇವೆರಡೂ ಪಕ್ಷಗಳಿಗೆ ಬಿಜೆಪಿಯೂ ಪೈಪೋಟಿ ನೀಡಿದೆ. ಪಾಂಡವಪುರ, ಶ್ರೀರಂಗಪಟ್ಟಣ, ಮದ್ದೂರು ತಾಲೂಕಿನ ಕೆಲವೆಡೆ ರೈತ ಸಂಘದ ಬೆಂಬಲಿತ ಅಭ್ಯರ್ಥಿಗಳು ಕಣದಲ್ಲಿದ್ದರು ಸಹ ಪ್ರಮುಖವಾಗಿ ಹಣದ ಬೆಟ್ಟಿಂಗ್ ನಡೆಯುತ್ತಿದೆಯಂತೆ.
500 ರೂ.ನಿಂದ 50,000 ರೂ.ವರೆಗೆ ಬೆಟ್ಟಿಂಗ್ ಕಟ್ಟುತ್ತಿದ್ದಾರಂತೆ. ಕೆಲವೆಡೆ 500ಕ್ಕೆ 1000 ರೂ.ಗಳನ್ನು ಬೆಟ್ಟಿಂಗ್ ಕಟ್ಟಲಾಗುತ್ತಿದೆಯಂತೆ. ಹೋಟೆಲ್‌ಗಳು, ಹಳ್ಳಿಕಟ್ಟೆ ಹಾಗೂ ರಾತ್ರಿ ಪಾರ್ಟಿಗಳಲ್ಲಿ ಸಹಜವಾಗಿಯೇ ಬೆಟ್ಟಿಂಗ್ ಪ್ರಕ್ರಿಯೆ ನಡೆಯುತ್ತಿದೆಯಂತೆ.