ಮಂಡ್ಯ: ಡಿಸ್ನಿ ಲ್ಯಾಂಡ್ ಹೆಸರಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸಾವಿರಾರು ಕೋಟಿ ರೂಪಾಯಿ ಹಣ ಹೂಡುವ ಸಾಮರ್ಥ್ಯವಿಲ್ಲ. ಉದ್ದೇಶಿತ ಯೋಜನೆಗಳಿಗೆ ಇರುವ ಬಂಡವಾಳದಲ್ಲೇ ಹೂಡಿಕೆ ಮಾಡಬೇಕಿದೆ. ದೊಡ್ಡ ಬಜೆಟ್ ಬೇಕೆಂದರೆ ಬೇರೆ ಇಲಾಖೆಯ ಸಹಭಾಗಿತ್ವ, ಬೇರೆ ಖಾಸಗಿ ವ್ಯಕ್ತಿಗಳ ಸಹಕಾರ ಬೇಕು. ಬೇರೆ ವ್ಯಕ್ತಿಗಳು ಮುಂದೆ ಬಂದರೆ ನಾವು ಹೂಡಿಕೆ ಮಾಡಲು ಯೋಚಿಸುತ್ತೇವೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ಡಿಸ್ನಿಲ್ಯಾಂಡ್ ಮಾದರಿ ಮನರಂಜನಾ ಪಾರ್ಕ್ ನಿರ್ಮಾಣ ಸಮ್ಮಿಶ್ರ ಸರ್ಕಾರದ ಕನಸಿನ ಕೂಸಾಗಿತ್ತು. ಅದರಲ್ಲೂ ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ಡಿ.ಕೆ.ಶಿಯವರ ಕನಸು. ಸಮ್ಮಿಶ್ರ ಸರ್ಕಾರ ಬದಲಾಗುತ್ತಿದ್ದಂತೆ ಡಿಸ್ನಿಲ್ಯಾಂಡ್ ವಿಚಾರ ಮರೆತೇ ಹೋಗಿತ್ತು. ಆದರೆ ಈಗ ಮತ್ತೆ ಈ ವಿಚಾರ ಮುನ್ನೆಲೆಗೆ ಬಂದಿದೆ.
ಕೆ.ಆರ್.ಎಸ್ ನಲ್ಲಿ ಡಿಸ್ನಿಲ್ಯಾಂಡ್ ಮಾದರಿ ಮನರಂಜನಾ ಪಾರ್ಕ್ ನಿರ್ಮಾಣ ಮಾಡಲು ಕಳೆದ ಸಮ್ಮಿಶ್ರ ಸರ್ಕಾರ ನಿರ್ಧಾರ ಮಾಡಿತ್ತು. ಈ ಬಗ್ಗೆ ಬಜೆಟ್‌ನಲ್ಲಿ ಘೋಷಣೆಯೂ ಮಾಡಿತ್ತು. ಆದರೆ ಸರ್ಕಾರ ಬೀಳುತ್ತಿದ್ದಂತೆ ಆ ಯೋಜನೆಯ ಕಥೆ ಮುಗಿಯಿತು ಎಂದೇ ಅಂದುಕೊಳ್ಳಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಈ ಯೋಜನೆ ಮಾಡಲು ಆಸಕ್ತಿ ತೋರಿಸಿದ್ದು, ಆದರೆ ಅದು ಪಿಪಿಪಿ ಮಾದರಿಯಲ್ಲಿ ಮಾಡಲು ಮುಂದಾಗಿದೆ. ಯಾರಾದರೂ ಇದರ ನಿರ್ಮಾಣದ ಒಲವು ತೋರಿದರೆ ನೋಡೋಣ ಅಂತ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದ್ದಾರೆ.