ಬೆಂಗಳೂರು: ಮಂಡ್ಯ ಹಾಲು ಒಕ್ಕೂಟಕ್ಕೆ ಆಡಳಿತಾಧಿಕಾರಿ ನೇಮಿಸಲು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿ ಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ರೈತರ ಜೊತೆ ಚೆಲ್ಲಾಟವಾಡುತ್ತಿದೆ. ರೈತ ಮಹಿಳೆಯರು, ರೈತರು ಕಷ್ಟಪಟ್ಟು ದಿನ ನಿತ್ಯದ ಜೀವನವನ್ನು ಸಾಗಿಸುತ್ತಿದ್ದಾರೆ. ಇವರು ಪ್ರಮುಖವಾಗಿ ಹೈನುಗಾರಿಕೆಯನ್ನು ಅವಲಂಬಿಸಿಕೊಂಡಿದ್ದಾರೆ. ಇದರ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ನಮ್ಮ ರೈತರು ಹೀಗೆ ಕಷ್ಟಪಟ್ಟು ಹಾಲು ಒಕ್ಕೂಟ ಸಂಸ್ಥೆಯನ್ನು ಬಲಗೊಳಿಸುವ ಮೂಲಕ ಒಂದೊಳ್ಳೆ ಹೆಸರನ್ನು ತಂದುಕೊಟ್ಟರೆ, ಕೆಲವರು ಹಾಲಿಗೆ ನೀರು ಬೆರೆಸುವಂತಹ ಕೆಟ್ಟ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.
ಇದು ಒಂದು ಜಿಲ್ಲೆಯ ಹಗರಣ ಎಂದು ಸುಮ್ಮನಾಗದೆ, ಇಂಥ ಪ್ರಕರಣವನ್ನು ಮಾನ್ಯ ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಬೇಕಿದೆ. ಆ ಮೂಲಕ ಇಡೀ ರಾಜ್ಯದಲ್ಲಿರುವ 14 ಹಾಲು ಒಕ್ಕೂಟಗಳಿಗೂ ಎಚ್ಚರಿಕೆ ಸಂದೇಶವನ್ನು ರವಾನಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.
ಮಂಡ್ಯ ಜಿಲ್ಲೆಯ ಜನತೆಗೆ ಸಂಕಷ್ಟದ ಮೇಲೆ ಸಂಕಷ್ಟ ಬಂದರೆ ಹೇಗೆ? ಮೊದಲೇ ಮೈಶುಗರ್ ಸಕ್ಕರೆ ಕಾರ್ಖಾನೆ ನಿಂತು ಹೋಗಿದೆ. ಇದನ್ನು ಅವಲಂಬಿಸಿದ ಲಕ್ಷಾಂತರ ಕುಟುಂಬಗಳು ಸಂಕಷ್ಟದಲ್ಲಿವೆ. ಅಲ್ಲದೆ, ಪರ್ಯಾಯ ಆದಾಯವಾಗಿ ಹೈನುಗಾರಿಕೆಯನ್ನು ಲಕ್ಷಾಂತರ ಕುಟುಂಬದವರು ನೆಚ್ಚಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಮತ್ತೆ ಇಂತಹ ಪ್ರಕರಣಗಳು ಕಂಡುಬರುತ್ತಿರುವುದು ಆತಂಕವನ್ನು ಹುಟ್ಟಿಸಿದೆ. ಅಲ್ಲದೆ, ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ, ಕ್ರಮ ಕೈಗೊಳ್ಳಲು ವಿಫಲವಾದರೆ ಮುಂದೆ ತಪ್ಪು ಮಾಡುವವರಿಗೆ ಅವಕಾಶವನ್ನು ಹಾಗೂ ಆಮಂತ್ರಣವನ್ನು ನೀಡಿದಂತಾಗುತ್ತದೆ ಎಂದಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಮಂಡ್ಯ ಜಿಲ್ಲೆಯಲ್ಲಿ 1250 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಒಂದು ಲಕ್ಷ ಕುಟುಂಬಗಳು ನೇರವಾಗಿ ಹೈನುಗಾರಿಕೆಯಲ್ಲಿ ತೊಡಗಿಕೊಂಡಿದ್ದರೆ, ಇದನ್ನು ಅವಲಂಬಿಸಿಕೊಂಡು ಹೆಚ್ಚುವರಿಯಾಗಿ 25 ಸಾವಿರ ಕುಟುಂಬಗಳು ಇದನ್ನೇ ಆಧಾರವಾಗಿಸಿಕೊಂಡು ಜೀವನ ನಡೆಸುತ್ತಿವೆ. ಅಲ್ಲದೆ, ಇದರಲ್ಲಿ ಸುಮಾರು 2 ಲಕ್ಷ ಜನ ಷೇರು ಬಂಡವಾಳವನ್ನು ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ರೈತರ ಶ್ರಮದಿಂದ ರಾಜ್ಯದಲ್ಲಿ ನಂದಿನಿ ಹಾಲಿನ ಬ್ರಾಂಡ್‌ಗೆ ಒಂದು ಒಳ್ಳೆಯ ಹೆಸರಿದೆ. ಆದರೆ, ಇಂಥ ಕೃತ್ಯಗಳಿಂದ ನಂದಿನಿ ಬ್ರಾಂಡ್‌ಗೆ ಕೆಟ್ಟ ಹೆಸರು ಬರಲಿದೆ. ಇದು ರಾಜ್ಯದ ರೈತರ ಹಿತಾಸಕ್ತಿಯಿಂದಲೂ ಕೆಟ್ಟ ಬೆಳವಣಿಗೆಯಾಗಿದೆ ಎಂದು ಆತಂಕ ಹೊರಹಾಕಿದ್ದಾರೆ.