ಮಂಡ್ಯ: ಬ್ರಿಟನ್‌ನಿಂದ ಮಂಡ್ಯ ಮೂಲದವರು ಜಿಲ್ಲೆಗೆ ಬಂದಿದ್ದಾರೆ. ಇದರ ಬಗ್ಗೆ ಸರ್ಕಾರ ಪಟ್ಟಿ ಕಳಿಸಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಂಚೇಗೌಡ ಮಾಹಿತಿ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಟನ್‌ನಿಂದ ಬಂದವರನ್ನು ಸರ್ಕಾರದಿಂದ ಗುರುತಿಸಿ ಜಿಲ್ಲೆಗೆ ಪಟ್ಟಿ ಕಳಿಸಿದ್ದಾರೆ. ಕೆಲವರನ್ನು ವಿಮಾನ ನಿಲ್ದಾಣದಲ್ಲೇ ವಶಕ್ಕೆ ಪಡೆದು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದರು.
ನ. 25ರಿಂದ ಈವರೆಗೆ 8 ಜನರು ಜಿಲ್ಲೆಗೆ ಬಂದಿದ್ದು, ಇವರಲ್ಲಿ ಇಬ್ಬರು ಮೈಸೂರಿನಲ್ಲಿ ಹೋಂ ಐಸೋಲೇಶನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದ 6 ಜನರು ಮಂಡ್ಯ ಜಿಲ್ಲೆಯಲ್ಲಿದ್ದಾರೆ. ಡಿ. 3ರಂದು ಮೂರು ಜನರು ಬಂದಿದ್ದಾರೆ. ಅವರು ಮಂಡ್ಯದ ಗಾಂಧಿನಗರದವರಾಗಿದ್ದು, ಯಾರಿಗೂ ರೋಗ ಲಕ್ಷಣಗಳಿಲ್ಲದೆ ಅವರೆಲ್ಲ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದರು.
ಇನ್ನು ನ. 21ರಂದು ಬಂದವರು ಮಳವಳ್ಳಿಯವರಾಗಿದ್ದು, ಅವರಿಗೆ ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡಲಾಗಿದೆ. ಆಗ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಇಂದು ಮತ್ತೊಮ್ಮೆ ಅವರಿಗೆ ಆರ್‌ಟಿಪಿಸಿಆರ್ ಟೆಸ್ಟ್ ನಡೆಸಲಾಗಿದ್ದು, ನೆಗೆಟಿವ್ ಬಂದರೆ ಅವರನ್ನು 14 ದಿನ ಕ್ವಾರಂಟೈನ್ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಈಗಾಗಲೇ ಅಗತ್ಯ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ. ಇದರ ಜೊತೆಗೆ ಅವರಿಗೆ ಮನೆಯಿಂದ ಹೊರ ಬರದಂತೆ ಸೂಚನೆ ನೀಡಲಾಗಿದೆ. ಅಲ್ಲದೇ ಎಲ್ಲರ ಟ್ರಾವೆಲ್ ಹಿಸ್ಟರಿ ಕಲೆಹಾಕಲಾಗಿದೆ. ಯಾರಿಗಾದರೂ ಪಾಸಿಟಿವ್ ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಭಯ ಪಡುವ ಆಗತ್ಯವಿಲ್ಲ: ಎಲ್ಲರೂ ಸಹಾ ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ನಿಯಮ ಪಾಲಿಸುವಂತೆ ಡಿಹೆಚ್‌ಒ ಡಾ. ಮಂಚೇಗೌಡ ಸಾರ್ವಜನಿಕರಲ್ಲಿ ಮನವಿ ಮಾಡಿದರು.