ಮಂಡ್ಯ: ಇಷ್ಟು ದಿನ ಕೊರೊನಾ ಸೋಂಕು ಹರಡದಂತೆ 'ಮುತ್ತತ್ತಿರಾಯ ಕಾಯುತ್ತಾನೆ' ಎಂದು ಮುತ್ತತ್ತಿ ಜನ ನೆಮ್ಮದಿಯಾಗಿದ್ದರು. ಆದ್ರೆ ಇದೀಗ ಆ ಗ್ರಾಮದ ಒಂದೇ ಕುಟುಂಬದ ನಾಲ್ವರಿಗೆ ಸೋಂಕು ದೃಢಪಟ್ಟಿದ್ದಾರೆ.
ಹಳ್ಳಿ ಹಳ್ಳಿಗೂ ಸೋಂಕು ಹರಡಿದ್ರೂ, ಇಷ್ಟು ದಿನ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮುತ್ತತ್ತಿ ಗ್ರಾಮಕ್ಕೆ ಕೊರೊನಾ ಕಾಲಿಟ್ಟಿರಲ್ಲಿಲ್ಲ. 320 ಜನಸಂಖ್ಯೆ ಇರುವ ಗ್ರಾಮದಲ್ಲಿ ಯಾರೊಬ್ಬರಿಗೂ ಸೋಂಕು ತಗುಲಿಲ್ಲ ಅನ್ನೋ ಖ್ಯಾತಿಗೆ ಈ ಗ್ರಾಮ ಒಳಗಾಗಿತ್ತು. ಆದ್ರೀಗ ಮುತ್ತತ್ತಿ ದೇವಾಲಯದ ಅರ್ಚಕ ಕುಟುಂಬಸ್ಥರಿಗೆ ಕೊರೊನಾ ಹರಡಿದೆ.
ದಟ್ಟ ಅರಣ್ಯದ ಮಧ್ಯೆ ಇರುವ ಮುತ್ತತ್ತಿ ಗ್ರಾಮ ಪ್ರವಾಸಿಗರ ಪ್ರೇಕ್ಷಣೀಯ ಸ್ಥಳವಾಗಿತ್ತು. ಇದೀಗ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಲ್ಲರಿಗೂ ಕೊರೊನಾ ಟೆಸ್ಟ್ ಮಾಡಿಸಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಡಿಹೆಚ್‌ಓ ಡಾ.ಮಂಚೇಗೌಡ ಮಾಹಿತಿ ನೀಡಿದರು.
ಫುಡ್ ಕಿಟ್ ವಿತರಣೆಯಿಂದ ಬಂತಾ ಕೊರೊನಾ?
ಇಷ್ಟು ದಿನ ಕೊರೊನಾ ಮುಕ್ತ ಗ್ರಾಮವಾಗಿದ್ದ ಮುತ್ತತ್ತಿಗೆ ಇದೇ ತಿಂಗಳ 23 ರಂದು ಫುಡ್ ಕಿಟ್ ವಿತರಣೆ ವೇಳೆ ಕೊರೊನಾ ಬಂತಾ ಎಂದು ಸ್ಥಳೀಯರು ಚರ್ಚಿಸುತ್ತಿದ್ದಾರೆ. ಶಾಸಕ ಅನ್ನದಾನಿ ಹಾಗೂ ತಾಲೂಕು ಅಧಿಕಾರಿಗಳು ಶಾಸಕರ ಬೆಂಬಲಿಗರು ಫುಡ್ ಕಿಟ್ ನೀಡಿದ್ದರು.
ಹೋಂ ಐಸೋಲೇಷನ್ ಮೂಲಕ ನಿಯಂತ್ರಣ
ಇತ್ತೀಚಿನ ದಿನಗಳಲ್ಲಿ ಹೋಂ ಐಸೋಲೇಷನ್ನಲ್ಲಿದ್ದ ಕೋವಿಡ್ ಸೋಂಕಿತರಿಬ್ಬರು ಸಾವನ್ನಪ್ಪಿದ್ದು ಹೋಂ ಐಸೋಲೇಷನ್ ಮೂಲಕ ಸೋಂಕು ನಿಯಂತ್ರಣಕ್ಕೆ ಮುಂದಾಗಿದ್ದೇವೆ ಎಂದು ಮಂಡ್ಯದಲ್ಲಿ ಡಿಎಚ್ಒ ಡಾ.ಮಂಚೇಗೌಡ ತಿಳಿಸಿದರು. ಜಿಲ್ಲೆಯಲ್ಲಿ ಒಬ್ಬರು ಕಿಡ್ನಿ ಸಮಸ್ಯೆ ಹಾಗೂ ಮತ್ತೊಬ್ಬರು ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. ಹೀಗಾಗಿ ಸೋಂಕಿತರನ್ನು ಕಡ್ಡಾಯವಾಗಿ ಕ್ವಾರಂಟೈನ್ ಕೇಂದ್ರಕ್ಕೆ ತರಲು ಸೂಚನೆ ನೀಡಲಾಗಿದೆ ಎಂದರು.
ಈ ಎರಡು ಪ್ರಕರಣಗಳು ಮಂಡ್ಯ ತಾಲೂಕು ಹಾಗೂ ಮದ್ದೂರು ತಾಲೂಕು ಪ್ರಕರಣಗಳಾಗಿದ್ದು, ಹೋಂ ಐಸೋಲೇಷನ್ ಇರುವವರು ಸಮಸ್ಯೆಯಾದರೆ ತಾಲ್ಲೂಕು ಆರೋಗ್ಯಾಧಿಕಾರಿ ಗಮನಕ್ಕೆ ತರುತ್ತಾರೆ. ಬಳಿಕ ತಕ್ಷಣವೇ ಆಸ್ಪತ್ರೆಗೆ ಶಿಫ್ಟ್ ಮಾಡಿ ಚಿಕಿತ್ಸೆ ಕೊಡುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.
ಹೋಂ ಐಸೋಲೇಷನ್ನಿಂದ ಆಸ್ಪತ್ರೆಗೆ ಬಂದು ಒಂದೆರಡು ಸಾವು ಸಂಭವಿಸಿದೆ. ಈ ರೀತಿಯ ಘಟನೆಗಳು ನಡೆಯಬಾರದೆಂದು ಹೋಂ ಐಸೋಲೇಷನ್ ನಿಯಂತ್ರಣಕ್ಕೆ ಮುಂದಾಗಿದ್ದೇವೆ. ಮನೆಯಲ್ಲಿ ಎಲ್ಲಾ ಸೌಕರ್ಯ ಇದ್ದರೆ ಮಾತ್ರ ಹೋಂ ಐಸೋಲೇಷನ್ಗೆ ಅವಕಾಶ ನೀಡುತ್ತೇವೆ. ಹೋಬಳಿ ಮಟ್ಟದಲ್ಲಿ ಕ್ವಾರಂಟೈನ್ ಕೇಂದ್ರ ತೆರೆಯಲು ಸೂಚಿಸಲಾಗಿದೆ ಎಂದರು.
ಹೋ ಐಸೋಲೇಷನ್ ಇರುವವರನ್ನು ಕ್ವಾರಂಟೈನ್ ಮಾಡಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಹಳ್ಳಿಗಳಲ್ಲಿ ಕೊರೊನಾ ಕಡಿವಾಣಕ್ಕೆ ಎಲ್ಲಾ ರೀತಿಯ ಸಿದ್ದತೆ ನಡೆಯುತ್ತಿದೆ. ಕ್ವಾರಂಟೈನ್ನಲ್ಲಿ ಚಿಕಿತ್ಸೆ ಪಡೆದರೆ ಕುಟುಂಬಸ್ಥರು ಹಾಗೂ ಗ್ರಾಮಕ್ಕೆ ಸೋಂಕು ಹರಡುವುದನ್ನ ತಡೆಗಟ್ಟಬಹುದಾಗಿದೆ. ಆದ್ದರಿಂದ ಸರ್ಕಾರದ ನಿರ್ದೇಶನದಂತೆ ನಡೆಯುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್ ಲಸಿಕೆ ಕೊರತೆ ಇಲ್ಲ: ಹೈಕೋರ್ಟ್ಗೆ ಸರ್ಕಾರದಿಂದ ಮಾಹಿತಿ