ಮಂಡ್ಯ : ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಹಿನ್ನೆಲೆ ಇಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಸಭೆ ನಡೆಸಿದ್ದಾರೆ. ಮತ್ತೊಂದು ಕಡೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಕೊಂಡಿದ್ದಾರೆ.
ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರು ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣ ಭೇದಿಸಿದ್ದು, ಈ ಸಂಬಂಧ 9 ಆರೋಪಿಗಳನ್ನು ಬಂಧಿಸಿದ್ದರು. ಮಂಡ್ಯ ತಾಲೂಕಿನ ಹಾಡ್ಯ ಗ್ರಾಮದ ಬಳಿ ಆಲೆಮನೆಯೊಂದರಲ್ಲಿ ಚಿಕ್ಕದಾದ ಶೆಡ್ ನಿರ್ಮಾಣ ಮಾಡಿ, ಬೆಂಗಳೂರಿನಿಂದ ಗರ್ಭಿಣಿಯರನ್ನು ಕರೆದುಕೊಂಡು ಬಂದು ಹೇಯಕೃತ್ಯ ಎಸಗಲಾಗುತ್ತಿತ್ತು. ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಸದ್ಯ ಕಾನೂನು ಬಾಹಿರ ಚಟುವಟಿಕೆಗೆ ಬ್ರೇಕ್ ಹಾಕಿದ್ದಾರೆ.
ಇವತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಘಟನೆಯ ಬಗ್ಗೆ ಸಮಗ್ರ ಮಾಹಿತಿ ಪಡೆದರು. ಅಲ್ಲದೇ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಮುಂದೆ ಈ ರೀತಿಯ ಘಟನೆಗಳು ಮತ್ತೆ ಮರು ಕಳುಹಿಸದಂತೆ ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದರು.
ಇನ್ನು ಈ ಬಗ್ಗೆ ಮಾತನಾಡಿದ ಸಚಿವರು, ಈ ಪ್ರಕರಣ ಒಂದು ಜಿಲ್ಲೆಗೆ ಮಾತ್ರ ಸಿಮೀತವಾಗಿಲ್ಲ. ಎರಡು ಮೂರು ಜಿಲ್ಲೆಗಳಲ್ಲಿ ಸೇರಿದೆ. ಘಟನಾ ಸ್ಥಳದಲ್ಲಿ ಯಾವುದೇ ರೀತಿಯ ಸ್ಕ್ಯಾನಿಂಗ್ ಉಪಯೋಗಿಸುವ ವಸ್ತುಗಳು ಸಿಕ್ಕಿಲ್ಲ. ಹೆಣ್ಣು ಭ್ರೂಣಲಿಂಗ ತಡೆಗಟ್ಟಲು ಸಮಿತಿಯನ್ನು ರಚನೆ ಮಾಡಲಾಗುವುದು. ಅಲ್ಲದೇ ಇಡೀ ಪ್ರಕರಣವನ್ನು ಸಿಐಡಿಗೆ ವಹಿಸಲು ಸಿಎಂ ಸಿದ್ದರಾಮಯ್ಯ ಅವರಿಗೂ ಒತ್ತಾಯ ಮಾಡುತ್ತೇನೆ ಎಂದರು.
ಮಂಡ್ಯ ತಾಲೂಕಿನ ಹಾಡ್ಯ ಗ್ರಾಮದ ಬಳಿ ಆಲೆಮನೆಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಆಯೋಗದ ಅಧ್ಯಕ್ಷ ಕೆ ನಾಗಣ್ಣಗೌಡ ನೇತೃತ್ವದಲ್ಲಿ ಸ್ಥಳೀಯರಿಂದಲೂ ಕೂಡ ಸಾಕಷ್ಟು ಮಾಹಿತಿಯನ್ನು ಪಡೆದುಕೊಂಡರು.
ಈ ವೇಳೆ ಮಾತನಾಡಿದ ಕೆ. ನಾಗಣ್ಣಗೌಡ ಅವರು, ಇವತ್ತಿನ ಕಾಲದಲ್ಲೂ ಹೆಣ್ಣು ಗಂಡು ಎಂಬ ತಾರತಮ್ಯ ಭ್ರೂಣ ಪತ್ತೆ ಮಾಡುವ ಕಾರ್ಯದಲ್ಲಿದ್ದೇವೆ ಎಂದರೆ ನಾವು ನಾಚಿಕೆ ಪಡುವಂತ ಸಂಗತಿ. ದುಡ್ಡಿಗಾಗಿ ಈ ರೀತಿ ಕೃತ್ಯ ಮಾಡಬಾರದು. ಭ್ರೂಣ ಹತ್ಯೆ ಪತ್ತೆ ಮಾಡುವುದು ತುಂಬಾ ಕ್ರೂರವಾದದು.
ನಾವು ಎಲ್ಲರು ವಿದ್ಯಾವಂತರಾಗಿದ್ದು, ಇಂತಹ ಕೃತ್ಯ ತಪ್ಪು ಎಂದು ಅರ್ಥಮಾಡಿಕೊಳ್ಳುತ್ತಿಲ್ಲ. ಹೆಣ್ಣು ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ. ಪೊಲೀಸರು ಅಲರ್ಟ್ ಆಗಿ ಈ ಪ್ರಕರಣಗಳನ್ನು ತಡೆಗಟ್ಟಬೇಕು. ಈ ಬಗ್ಗೆ ಸಂಪೂರ್ಣ ತನಿಖೆಯಾಗಿ ತಪ್ಪಿತಸ್ಥರ ವಿರುದ್ದ ಕ್ರಮವಾಗಬೇಕು. ಇದರ ಹಿಂದೆ ದೊಡ್ಡ ಜಾಲ ಇರುವುದು ಅನುಮಾನವಿದೆ. ಹಾಗಾಗಿ ಜಾಲವನ್ನು ಪತ್ತೆ ಹಚ್ಚಬೇಕು. ಹೆಣ್ಣು ಮಕ್ಕಳ ಹತ್ಯೆ ಮಾಡುವುದು ಘೋರ ಅಪರಾಧ ಎಂದು ಹೇಳಿದರು.
ಇದನ್ನೂಓದಿ : ಹಸುಗೂಸು ಮಾರಾಟ ಪ್ರಕರಣ: 6 ವರ್ಷದಲ್ಲಿ 250ಕ್ಕೂ ಹೆಚ್ಚು ಮಕ್ಕಳು ಬಿಕರಿ, ಸಿಸಿಬಿ ವಿಚಾರಣೆ ವೇಳೆ ಬೆಳಕಿಗೆ