ಮಂಡ್ಯ: ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ಹೆದ್ದಾರಿಯಲ್ಲಿ ದೇವಸ್ಥಾನ ನಿರ್ಮಾಣ ಮಾಡಿರುವ ಮೇಲುಕೋಟೆ ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು ಸೇರಿದಂತೆ ಅವರ ಬೆಂಬಲಿಗರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ನಿರ್ಮಾಣ ಮಾಡಿರುವ ದೇಗುಲ ತೆರವು ಮಾಡುವಂತೆ ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ(ಕಾನೂನು ಸುವ್ಯವಸ್ಥೆ) ಎಂ.ಆರ್. ಶೋಭಾ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಇತ್ತೀಚೆಗೆ ಮೇಲುಕೋಟೆ ಶಾಸಕ ತಮ್ಮ ರಾಜಕಿಯ ಪ್ರಭಾವ ಬಳಸಿಕೊಂಡು ಶ್ರೀರಂಗಪಟ್ಟಣ-ಜೀವರ್ಗಿ ರಾಷ್ಟ್ರೀಯ ಹೆದ್ದಾರಿ-50 ರಲ್ಲಿ ಮೇಲುಕೋಟೆ ಬಳಿಯ ಜಕ್ಕನಹಳ್ಳಿ ಸರ್ಕಲ್ನಲ್ಲಿ ಗಣಪತಿ ದೇವಾಲಯವನ್ನು ಅಕ್ರಮವಾಗಿ ನಿರ್ಮಿಸಿ, ಉದ್ಘಾಟನೆ ಕಾರ್ಯ ಕೂಡ ನೆರವೇರಿಸಿದ್ದರು. ದೇವಸ್ಥಾನವನ್ನು ಅಕ್ರಮವಾಗಿ ಕಟ್ಟಿರುವುದಲ್ಲದೇ, ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆಯಾಗಿದ್ದು ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಮಂಡ್ಯ ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದರು.
ದೂರು ಸ್ವೀಕರಿಸಿ ದಾಖಲೆಗಳನ್ನು ಪರಿಶೀಲಿಸಿದ ಸರ್ಕಾರದ ಅಧೀನ ಕಾರ್ಯದರ್ಶಿಗಳು, ದೇವಾಲಯವನ್ನು ಅಕ್ರಮವಾಗಿ ನಿರ್ಮಿಸಿ, ಸುಪ್ರೀಂಕೋರ್ಟ್ ಆದೇಶವನ್ನು ಸಹ ಉಲ್ಲಂಘನೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಅಕ್ರಮವಾಗಿ ನಿರ್ಮಿಸಿರುವ ದೇಗುಲ ತೆರವು ಸೇರಿದಂತೆ ಶಾಸಕ ಹಾಗೂ ಅವರ ಬೆಂಬಲಿಗರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದು ಸೂಚಿಸಿದ್ದಾರೆ.