ಮಂಡ್ಯ: ಕಾರು ನಿಯಂತ್ರಣ ತಪ್ಪಿ ಸ್ಕೂಟರ್‌ಗೆ ಡಿಕ್ಕಿ ಹೊಡೆದು ದೇವಸ್ಥಾನದ ಕಾಂಪೌಂಡ್ ಮೇಲೆ ಹತ್ತಿ ನಿಂತ ಘಟನೆ ಮಂಡ್ಯ ನಗರದ ಬಿಸಿಲು ಮಾರಮ್ಮ ದೇವಸ್ಥಾನದ ಬಳಿ ಜರುಗಿದೆ.
ಮಂಡ್ಯ ನಗರದ ಕಲ್ಲಹಳ್ಳಿ ಬಳಿಯ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಬಿಸಿಲು ಮಾರಮ್ಮ ದೇವಸ್ಥಾನದ ಬಳಿ ಅಪಘಾತ ಜರುಗಿದೆ. ಬೆಂಗಳೂರು ಕಡೆಯಿಂದ ಬರುತ್ತಿದ್ದ ಕಾರು ಇದ್ದಕ್ಕಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ, ಕಾರು ಪಕ್ಕದಲ್ಲಿ ಸ್ಕೂಟರ್‌ನಲ್ಲಿ ಬರುತ್ತಿದ್ದ ಸಿದ್ದಯ್ಯನಕೊಪ್ಪಲು ಗ್ರಾಮದ ಸತೀಶ್ (40) ಎಂಬುವವರಿಗೆ ಡಿಕ್ಕಿ ಹೊಡೆದು ಬಳಿಕ ಬಿಸಿಲು ಮಾರಮ್ಮ ದೇವಸ್ಥಾನದ ಕಾಂಪೌಂಡ್ ಮೇಲೆ ಹತ್ತಿ ನಿಂತಿದೆ. ಘಟನೆಯಲ್ಲಿ ಸತೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತ ಸತೀಶ್ ತೆಂಗಿನ ಕಾಯಿ ವ್ಯಾಪಾರ ಮುಗಿಸಿಕೊಂಡು ಮನೆಗೆ ತೆರಳುವ ವೇಳೆ ಈ ಘಟನೆ ಜರುಗಿದ್ದು, ಅಪಘಾತವಾದ ತಕ್ಷಣವೇ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒಂದು ವೇಳೆ, ಬಿಸಿಲು ಮಾರಮ್ಮ ದೇಗುಲದ ಕಾಂಪೌಂಡ್‍ಗೆ ಡಿಕ್ಕಿಯಾಗಿ ಕಾರು ನಿಲ್ಲದಿದ್ದರೆ, ಇನ್ನಷ್ಟು ಅನಾಹುತಗಳು ಜರುಗುವ ಸಾಧ್ಯತೆ ಇತ್ತು. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಇದನ್ನೂ ಓದಿ: ಹುಕ್ಕೇರಿಯಲ್ಲಿ ಭೀಕರ ಸರಣಿ ಅಪಘಾತ: ತಾಯಿ ಮತ್ತು ಆರು ವರ್ಷದ ಮಗ ಸ್ಥಳದಲ್ಲೇ ಸಾವು