ಮಂಡ್ಯ: ಸಚಿವ ಚೆಲುವರಾಯಸ್ವಾಮಿ ವಿರುದ್ಧ ಕೃಷಿ ಇಲಾಖೆ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಸಹಿ ಮಾಡಿ ಷಡ್ಯಂತ್ರ ರೂಪಿಸಿ ರಾಜ್ಯಪಾಲರಿಗೆ ಸುಳ್ಳು ದೂರು ನೀಡಲಾಗಿದೆ ಎಂದು ಆರೋಪಿಸಿ, ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಂಡ್ಯದಲ್ಲಿ ಇಂದು (ಮಂಗಳವಾರ) ಪ್ರತಿಭಟನೆ ನಡೆಸಿದರು.
ಶಾಸಕ ಗಣಿಗ ರವಿಕುಮಾರ್ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ನಗರದ ಸಂಜಯ್ ವೃತ್ತದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯವರೆಗೆ ಬೃಹತ್ ಮೆರವಣಿಗೆ ನಡೆಸಿದರು. ಸಚಿವರಿಗೆ ಕಳಂಕ ತರುವ ವ್ಯವಸ್ಥಿತ ಷಡ್ಯಂತ್ರ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಮಹಿಳಾ ಕಾರ್ಯಕರ್ತರು ಪೊರಕೆ ಹಿಡಿದು ಜೆಡಿಎಸ್ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿದರು.
ಹೆಚ್.ಡಿ. ಕುಮಾರಸ್ವಾಮಿ ವಿರುದ್ದ ಕಿಡಿ: ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮಾತನಾಡಿ, ''ಕುಮಾರಸ್ವಾಮಿ ಇಷ್ಟುದಿನ ಮಂಡ್ಯ ಜಿಲ್ಲೆ ಹಾಳು ಮಾಡಿದ್ದಾಯ್ತು. ಈಗಲಾದರೂ ಗೌರವಯುತವಾಗಿ ನಡೆದುಕೊಳ್ಳಿ. ಸಿನಿಮಾ ತೆಗೆಯೋಕೆ ಮಾತ್ರ ಕುಮಾರಸ್ವಾಮಿ ಯೋಗ್ಯರಿದ್ದಾರೆ. ದೇವೇಗೌಡ್ರೇ ಮೊದಲು ಕುಮಾರಸ್ವಾಮಿಯವರನ್ನು ಮನೆಯೊಳಗೆ ಕೂಡಾಕಿ, ಹೊರಗಡೆ ಬಿಡಬೇಡಿ" ಎಂದರು.
ಶಾಸಕ ಗಣಿಗ ರವಿಕುಮಾರ್ ಮಾತನಾಡಿ, ''ಯಾರು ಫೇಕ್ ಲೆಟರ್ ಬರೆದಿದ್ದಾರೆ ಎಂಬುದನ್ನು ತನಿಖೆ ಮಾಡಬೇಕು. ಯಾರು ಲೆಟರ್ ಪೋಸ್ಟ್ ಮಾಡಿದ್ದಾರೆ ಅನ್ನೋದು ಸಿಸಿಟಿವಿ ಪರಿಶೀಲಿಸಿದ್ರೆ ಗೊತ್ತಾಗಲಿದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ಫೇಕ್ ಲೆಟರ್ನಲ್ಲಿ ಕಳೆದ ಬಾರಿ ನಮ್ಮ ಶಾಸಕರು ಗೆದ್ದಿದ್ರು. ಈ ಬಾರಿ ಕಾಂಗ್ರೆಸ್ ಶಾಸಕರು ಗೆದ್ದಿದ್ದಾರೆ. ಅಲ್ಲದೇ ಪತ್ರದಲ್ಲಿ ಕುಮಾರಸ್ವಾಮಿ ಅವರೇ ನ್ಯಾಯ ಕೊಡಿಸಿ ಎಂದು ಬರೆಯಲಾಗಿದೆ. ಇದರಿಂದ ಇದೊಂದು ನಕಲಿ ಪತ್ರ, ಅದು ಜೆಡಿಎಸ್ನವರ ಪಾತ್ರ ಇರೋದು ಗೊತ್ತಾಗಿದೆ. ಯಾರು ಪತ್ರ ಬರೆದಿದ್ದಾರೆ ಅವರಿಗೆ ಪೊರಕೆ ಜೊತೆ ಸೇವೆ ಮಾಡಬೇಕು. ಕೂಡಲೇ ಕಿಡಿಗೇಡಿಗಳನ್ನು ಬಂಧಿಸಬೇಕು'' ಎಂದು ಒತ್ತಾಯಿಸಿದರು.
''ಪತ್ರದಲ್ಲಿ ಆರು ಮಂದಿ ಅಧಿಕಾರಿಗಳ ಸಹಿಯನ್ನು ಒಬ್ಬನೇ ಮಾಡಿದ್ದಾನೆ. ನಕಲಿ ವಿಳಾಸ ಹಾಕಿ ಪೋಸ್ಟ್ ಮಾಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ಮಾಡುವಂತೆ ಸಿಎಂ ಬಳಿ ಮನವಿ ಮಾಡಿದ್ದೇವೆ. ಹಾಗಾಗಿ ನಕಲಿ ಪತ್ರದ ಸೂತ್ರದಾರರನ್ನು ಪತ್ತೆ ಹಚ್ಚಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು'' ಎಂದು ಆಗ್ರಹಿಸಿದರು. ಕಾಂಗ್ರೆಸ್ ನಾಯಕರು ಎಸ್ಪಿಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: 'ಚಲುವರಾಯಸ್ವಾಮಿ ತೇಜೋವಧೆಗೆ ಯತ್ನ': ರಾಜ್ಯಪಾಲರಿಗೆ ನೀಡಿದ ದೂರಿನ ಪತ್ರದ FSL ತನಿಖೆಗೆ ಆಗ್ರಹ