ಮಂಡ್ಯ: ಮದ್ದೂರು ತಾಲೂಕಿನ ಆಬಲವಾಡಿಯ ತೋಪಿನ ತಿಮ್ಮಪ್ಪನ ಹರಿಸೇವೆ ರಾಜ್ಯದಲ್ಲೇ ವಿಶೇಷ. ಈ ವೇಳೆ ರಾತ್ರಿ ಪೂರ್ತಿ ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಜೊತೆಗೆ ದೇವರಿಗೆ ವಿಶೇಷ ಅಲಂಕಾರ ಮಾಡಿ ಉತ್ಸವ ಮೂರ್ತಿಯನ್ನು ಗ್ರಾಮದಲ್ಲೆಲ್ಲಾ ಮೆರವಣಿಗೆ ಮಾಡಲಾಗುತ್ತದೆ.
ಬಳಿಕ ಮುಂಜಾನೆ ಹರಿ ಸೇವೆ ಆರಂಭವಾಗುತ್ತದೆ. ಇನ್ನೂ ವಿಶೇಷ ಅಂದ್ರೆ, ಇಲ್ಲಿನ ದೇವಳದ ಪ್ರಸಾದವನ್ನು ಎಲೆಗಳಲ್ಲೇ ಶ್ರೇಷ್ಠ, ವಿಶೇಷವೆನಿಸುವ ತಾವರೆ ಎಲೆಯಲ್ಲಿ ನೀಡುವ ಅಪರೂಪದ ಪದ್ಧತಿಯಿದೆ.
ಈ ರೀತಿಯ ವಿಶೇಷ ಪೂಜೆ ಹಾಗೂ ಪ್ರಸಾದ ಸ್ವೀಕಾರ ಕಾರ್ಯಕ್ರಮ ರಾಜ್ಯದ ಯಾವ ಮೂಲೆಯಲ್ಲೂ ನಡೆಯೋದಿಲ್ಲ. ಇದೊಂದು ರೀತಿಯ ವಿಶೇಷ ಸಾಮೂಹಿಕ ಭೋಜನದ ಹರಿ ಸೇವೆ ಎನ್ನಬಹುದು. ಈ ಎಲೆಯನ್ನು ದೇವಸ್ಥಾನದ ಆಡಳಿತ ಮಂಡಳಿಯೇ ವ್ಯವಸ್ಥೆ ಮಾಡುತ್ತದೆ. ಸಾವಿರಾರು ಮಂದಿ ತಾವರೆ ಎಲೆಯಲ್ಲೇ ಪ್ರಸಾದ ಸ್ವೀಕರಿಸಿ ಹೋಗುವುದು ಇಲ್ಲಿಯ ವಿಶೇಷ.
ಈ ಬಾರಿಯ ತೋಪಿನ ತಿಮ್ಮಪ್ಪನ ಹರಿಸೇವೆಯನ್ನು ಅತ್ಯಂತ ಸಂಭ್ರಮದಿಂದ ಅದ್ಧೂರಿಯಾಗಿ ಆಚರಿಸಲಾಯಿತು. ಇತ್ತೀಚೆಗಷ್ಟೇ ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ವಿಷಪ್ರಸಾದ ಪ್ರಕರಣ ನಡೆದಿತ್ತು. ಈ ಹಿನ್ನೆಲೆಯಲ್ಲಿ ಭಕ್ತಾದಿಗಳ ಸುರಕ್ಷತಾ ದೃಷ್ಟಿಯಿಂದ ಅಧಿಕಾರಿಗಳು ಊಟ ತಿಂದು ಪ್ರಸಾದದ ಪರೀಕ್ಷೆ ನಡೆಸಿದರು. ಅನಂತರ ಭಕ್ತರು ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ, ಪ್ರಸಾದ ಸೇವಿಸಿದರು.
ಭಕ್ತರಿಗೆ ಪ್ರಸಾದ ನೀಡಲು ಗ್ರಾಮಸ್ಥರು ರಾತ್ರಿಯೆಲ್ಲಾ ಟನ್ ಗಟ್ಟಲೆ ಆಹಾರದ ತಯಾರಿ ಕಾರ್ಯದಲ್ಲಿ ತೊಡಗಿದ್ದರು. ಪೂಜೆ ವೇಳೆ ಜನದಟ್ಟಣೆಯನ್ನು ನಿಯಂತ್ರಿಸಲು ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಏರ್ಪಡಿಸಲಾಗಿತ್ತು.