ಮಂಡ್ಯ: ಹಾಡಹಗಲೇ ಜಿಲ್ಲೆಯ ಮದ್ದೂರು ತಾಲೂಕು ಕಚೇರಿ ಆವರಣದಲ್ಲಿ ವ್ಯಕ್ತಿಯೋರ್ವರಿಗೆ ಕುಡುಗೋಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಮದ್ದೂರು ತಾಲೂಕಿನ ಮರಳಿಗ ಗ್ರಾಮದ ಚನ್ನರಾಜು ಅಲಿಯಾಸ್ ಚಾಟಿ ಹಲ್ಲೆಗೊಳಗಾದವರು. ಇದೇ ಗ್ರಾಮದ ನಂದನ್ ಕುಮಾರ್ ಎಂಬಾತ ಹಳೆ ದ್ವೇಷದ ಹಿನ್ನೆಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಇಬ್ಬರ ನಡುವೆ ಜಮೀನು ವಿಚಾರವಾಗಿ ವೈಷಮ್ಯ ಇತ್ತು. ಈ ಹಿನ್ನೆಲೆ ಆರೋಪಿಯು ಹಲ್ಲೆ ನಡೆಸಿದ್ದಾನೆ ತಿಳಿದುಬಂದಿದೆ.
ಇನ್ನು ಗಂಭೀರವಾಗಿ ಗಾಯಗೊಂಡಿರುವ ಚನ್ನರಾಜುವನ್ನು ಮದ್ದೂರು ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಗೆ ಕಳುಹಿಸಲಾಗಿದೆ. ಹಲ್ಲೆ ನಡೆಸಿದ ನಂದನ್ ಕುಮಾರ್ಗೆ ಸ್ಥಳೀಯರು ಥಳಿಸಿದ್ದು, ಆತನಿಗೂ ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಮದ್ದೂರು ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ : ಘಟನೆಯಲ್ಲಿ ಗಾಯಗೊಂಡ ಮತ್ತು ಹಲ್ಲೆ ನಡೆಸಿದ ಆರೋಪಿಗಳಿಬ್ಬರೂ ಮದ್ದೂರು ತಾಲೂಕಿನ ಮರಳಿಗ ಗ್ರಾಮದವರು. ಹಲ್ಲೆಗೊಳಗಾದ ಚನ್ನರಾಜು ಪುತ್ರಿ ಅಪ್ರಾಪ್ತೆಯಾಗಿದ್ದಾಗಲೇ ಆರೋಪಿ ನಂದನ್ ಮತ್ತು ಆತನ ಸಹಚರರು ಸ್ನೇಹಿತನೋರ್ವನ ಜೊತೆ ಮದುವೆ ಮಾಡಿಸಿದ್ದರಂತೆ. ಈ ವಿಚಾರವಾಗಿ ನಂದನ್ ಸೇರಿದಂತೆ ಹಲವರ ವಿರುದ್ಧ ಚನ್ನರಾಜು ಪೋಕ್ಸೊ ಪ್ರಕರಣವನ್ನು ದಾಖಲಿಸಿದ್ದರು. ಬಳಿಕ ಜಾಮೀನಿನ ಮೇಲೆ ಹೊರ ಬಂದ ನಂದನ್, ಚನ್ನರಾಜು ಮತ್ತು ಆತನ ಕುಟುಂಬದ ಮೇಲೆ ಕೆಂಡ ಕಾರುತ್ತಲೇ ಇದ್ದರು. ಅಷ್ಟೇ ಅಲ್ಲದೆ ಒಮ್ಮೊಮ್ಮೆ ಕುಡಿದು ಬಂದು ಚನ್ನರಾಜು ಮನೆ ಮೇಲೆ ಕಲ್ಲು ತೂರಾಟ ಮಾಡುವುದು, ಚನ್ನರಾಜುಗೆ ಬೆದರಿಕೆ ಹಾಕುವುದು ಇತ್ಯಾದಿಗಳನ್ನು ಮಾಡುತ್ತಿದ್ದರಂತೆ. ಈ ಸಂಬಂಧ ಗ್ರಾಮದಲ್ಲಿ ರಾಜಿ ಸಂಧಾನ ಸಹ ನಡೆಸಲಾಗಿತ್ತು ಎಂದು ತಿಳಿದುಬಂದಿದೆ. ಆದರೂ ನಂದನ್ ದ್ವೇಷ ಕಾರುವುದನ್ನು ನಿಲ್ಲಿಸಿರಲಿಲ್ಲವಂತೆ.
ಇಂದು ಮಧ್ಯಾಹ್ನ ಚನ್ನರಾಜು ತಮ್ಮ ಮೂರೂವರೆ ಎಕರೆ ಜಮೀನನ್ನು ತನ್ನ ಪತ್ನಿ ಮತ್ತು ಮಗಳ ಹೆಸರಿಗೆ ಮಾಡಿಸಲು ಬಂದಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ನಂದನ್, ಮದ್ದೂರು ತಹಶೀಲ್ದಾರ್ ಕಚೇರಿಯಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ಇಂದು ಮದ್ದೂರು ತಹಶೀಲ್ದಾರ್ ನ್ಯಾಯಾಲಯದಲ್ಲಿ ನಡೆಯಬೇಕಿತ್ತು. ಆದರೆ ಆರೋಪಿ ನಂದನ್ ಪೂರ್ವ ನಿಯೋಜಿತವಾಗಿ ಮನೆಯಿಂದಲೇ ಕುಡುಗೋಲು ತಂದು ತಾಲೂಕು ಕಚೇರಿ ಆವರಣದಲ್ಲೇ ಚನ್ನರಾಜು ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ತಪ್ಪಿಸಿಕೊಳ್ಳಲು ಓಡಿದರೂ ಬೆಂಬಿಡದೇ ಅಟ್ಟಾಡಿಸಿಕೊಂಡು ಕುಡುಗೋಲಿನಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಕಲ್ಲು ತೂರಿ ನಂದನ್ನಿಂದ ಚನ್ನರಾಜು ಅವರನ್ನು ಬಿಡಿಸಿದ್ದಾರೆ. ಆರೋಪಿ ನಂದನ್ ಕೈಲಿದ್ದ ಕುಡುಗೋಲು ನೆಲಕ್ಕೆ ಬೀಳುತ್ತಿದ್ದಂತೆ ಸಾರ್ವಜನಿಕರು ನಂದನ್ ಗೆ ಹಿಗ್ಗಾಮುಗ್ಗ ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ಎಸ್ಪಿ ಹೇಳಿದ್ದೇನು ? : ಘಟನೆ ಸಂಬಂಧ ಪ್ರತಿಕ್ರಿಯಿಸಿದ ಎಸ್ಪಿ ಎನ್ ಯತೀಶ್, ಚನ್ನರಾಜು ಎಂಬುವರ ಮೇಲೆ ಆರೋಪಿ ನಂದನ್ ಮದ್ದೂರು ತಹಶೀಲ್ದಾರ್ ಕಚೇರಿ ಆವರಣದಲ್ಲಿ ಹಲ್ಲೆ ಮಾಡಿದ್ದಾನೆ. ಆರೋಪಿ ನಂದನ್ ಮೇಲೆ ಚನ್ನರಾಜು ಪೋಕ್ಸೋ ಪ್ರಕರಣವನ್ನು ದಾಖಲಿಸಿದ್ದರು. ಇವತ್ತು ಜಮೀನು ವಿವಾದ ಸಂಬಂಧ ಚನ್ನರಾಜು ತಹಶೀಲ್ದಾರ್ ಕಚೇರಿಗೆ ಬಂದಿದ್ದರು. ಈ ವೇಳೆ ಆರೋಪಿ ನಂದನ್ ಕುಡುಗೋಲು, ಖಾರದ ಪುಡಿ ತಂದು ಕಚೇರಿ ಆವರಣದಲ್ಲೇ ಏಕಾಏಕಿ ಹಲ್ಲೆ ಮಾಡಿದ್ದಾನೆ. ಈ ವೇಳೆ ಸಾರ್ವಜನಿಕರು ಆರೋಪಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಸಂದರ್ಭ ಆರೋಪಿ ಕೈಯಲಿದ್ದ ಕುಡುಗೋಲು ಕೆಳಗೆ ಬಿದ್ದಿದ್ದು, ಈ ವೇಳೆ ಸಾರ್ವಜನಿಕರು ಆರೋಪಿಗೆ ಹೊಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ : ನಕಲಿ ಇಡಿ ಅಧಿಕಾರಿಗಳಿಂದ ದಾಳಿ: 25 ಲಕ್ಷ ನಗದು, 3 ಕೆಜಿ ಚಿನ್ನ ದೋಚಿ ಪರಾರಿ!