ಮಂಡ್ಯ: ನೋಟಿನ ಕಂತೆ ಮಧ್ಯೆ ಬಿಳಿ ಕಾಗದ ಇಟ್ಟು ವಂಚಿಸಲು ಯತ್ನಿಸಿದವನಿಗೆ ಸಾರ್ವಜನಿಕರು ಗೂಸಾ ಕೊಟ್ಟಿರುವ ಘಟನೆ ಸಕ್ಕರೆನಾಡು ಮಂಡ್ಯದ ಉಪನೋಂದಣಿ ಕಚೇರಿ ಬಳಿ ಶುಕ್ರವಾರ ಸಂಜೆ ನಡೆದಿದೆ. ನೋಟಿನ ಮಧ್ಯೆ ಬಿಳಿ ಹಾಳೆ ಇಟ್ಟು ಯಾಮಾರಿಸಲು ಮುಂದಾದ ಸಯ್ಯದ್ ಆರುನ್ ತಮೀಮ್ ಎಂಬಾತನಿಗೆ ಸ್ಥಳೀಯರು ಧರ್ಮದೇಟು ನೀಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಂಡ್ಯದ ಕಾಳೇನಹಳ್ಳಿ ಗ್ರಾಮದ ಉಮೇಶ್ ಎಂಬುವರು ತಮ್ಮ ಜಮೀನು ಮಾರಾಟ ಮಾಡಲು ಮುಂದಾಗಿದ್ದರು. ಇದನ್ನು ಮಂಡ್ಯ ನಗರದ ಸಬ್ಬರಿಯಬಾದ್ ನಿವಾಸಿ ಸಯ್ಯದ್ ಆರುನ್ ತಮೀಮ್ ಎಂಬ ವ್ಯಕ್ತಿ ಖರೀದಿ ಮಾಡಿಕೊಳ್ಳುವುದಾಗಿ ತಿಳಿಸಿದ್ದರು. ಹೀಗಾಗಿ, ಶುಕ್ರವಾರ ನಗರದ ಉಪ ನೊಂದಣಿ ಕಚೇರಿಗೆ ಎರಡೂ ಕಡೆಯವರು ಆಗಮಿಸಿದ್ದರು. ಈ ವೇಳೆ, ಮೊದಲೇ ಮಾತುಕತೆ ನಡೆಸಿದಂತೆ ಸಯ್ಯದ್ ಆರುನ್, ನೋಂದಣಿ ಬಳಿಕ 30 ಲಕ್ಷ ಹಣ ಕೊಡೋದಾಗಿ ಹೇಳಿ ನೋಟಿನ ಮಧ್ಯೆ ಬಿಳಿ ಹಾಳೆಯ ಕಂತೆಯನ್ನು ಇಟ್ಟು ಯಾಮಾರಿಸಿದ್ದಾರೆ.
ಹಣ ಪಡೆದು ಲೆಕ್ಕಾಚಾರದಲ್ಲಿ ನಿರತರಾಗಿದ್ದ ಉಮೇಶ್ ಕಡೆಯವರು ಬಿಳಿ ಹಾಳೆ ಕಂಡು ದಿಗ್ಗಭ್ರಮೆಗೊಂಡಿದ್ದಾರೆ. ಬಳಿಕ, ಉಪನೋಂದಣಿ ಕಚೇರಿ ಬಳಿ ಇದ್ದ ಸಾರ್ವಜನಿಕರು ವಂಚಿಸಿದ ವ್ಯಕ್ತಿಯನ್ನು ಹಿಡಿದು ಥಳಿಸಿದ್ದು, ಮಂಡ್ಯದ ಪಶ್ಚಿಮ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯಕ್ಕೆ ಮಂಡ್ಯ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ನಕಲಿ ನೋಟು ನೆಪ ಹೇಳಿ ಹಣ ಎಗರಿಸಿದ ಖದೀಮ: ಬ್ಯಾಂಕಿನಿಂದಲೇ ನಮಗೆ ನಕಲಿ ನೋಟು ಬಂದಿದೆ ಎಂದು ಗ್ರಾಹಕರ ಲಕ್ಷ್ಯವನ್ನು ಬೇರೆಡೆ ಸೆಳೆದು ಎಟಿಎಂ ಕಾರ್ಡ್ನಿಂದ ಹಣ ಡ್ರಾ ಮಾಡಿರುವ ಪ್ರಕರಣವೊಂದು ಕಳೆದ ಮಾರ್ಚ್ ತಿಂಗಳಲ್ಲಿ ಗುಜರಾತ್‌ನ ವಡೋದರಾದಲ್ಲಿ ಬೆಳಕಿಗೆ ಬಂದಿತ್ತು. ನಕಲಿ ನೋಟುಗಳ ನೆಪ ಹೇಳಿಕೊಂಡು ಬಂದಿರುವ ವಂಚಕನೊಬ್ಬ ಖಾತೆದಾರರರೊಬ್ಬರ ಜೊತೆ ಮಾತಿಗಿಳಿದು ಅವರ ಎಟಿಎಂ ಕಾರ್ಡ್ ಬಳಸಿಕೊಂಡು ಲಕ್ಷಾಂತರ ರೂ. ಎಗರಿಸಿ ಪರಾರಿಯಾಗಿದ್ದ. ಈ ಕುರಿತು ದೂರು ದಾಖಲಾಗಿತ್ತು.
ಇದನ್ನೂ ಓದಿ : ನಕಲಿ ನೋಟುಗಳ ನೆಪ ಹೇಳಿ 2.54 ಲಕ್ಷ ರೂ. ಎಗರಿಸಿದ ಖದೀಮರು..!
ಇನ್ನೊಂದೆಡೆ, ಜನವರಿ 25 ರಂದು ಖೋಟಾನೋಟು ಮುದ್ರಿಸಿ ರಾಜಧಾನಿಯಲ್ಲಿ ಚಲಾವಣೆಗೆ ಯತ್ನಿಸುತ್ತಿದ್ದ ನಾಲ್ವರು ಅಂತರ ರಾಜ್ಯ ಆರೋಪಿಗಳನ್ನು ಸುಬ್ರಮಣ್ಯಪುರ ಪೊಲೀಸರು ಬಂಧಿಸಿ, 11 ಲಕ್ಷ ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಆಂಧ್ರಪ್ರದೇಶದ ಕಡಪ ಜಿಲ್ಲೆಯ ಚರಣ್ ಸಿಂಗ್, ಪುಲ್ಲಲರೇವು ರಾಜ, ರಜನಿ ಹಾಗೂ ಗೋಪಿನಾಥ್ ಬಂಧಿತರು. ಇವರಿಂದ 500 ಮುಖಬೆಲೆಯ 11 ಲಕ್ಷ ರೂಪಾಯಿ ನಕಲಿ ಹಣ, ಖೋಟಾ ನೋಟು ಪ್ರಿಂಟ್ ಮಾಡುವ ಉಪಕರಣಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿತ್ತು.
ಇದನ್ನೂ ಓದಿ : ಖೋಟಾನೋಟು ಮುದ್ರಿಸಿ ಬೆಂಗಳೂರಲ್ಲಿ ಮಾರಾಟ ಮಾಡುತ್ತಿದ್ದ ಆಂಧ್ರ ಗ್ಯಾಂಗ್ ಅರೆಸ್ಟ್...