ಕೊಪ್ಪಳ: ಕೆಲವೆಡೆ ಪ್ರವಾಹ ರೈತರನ್ನು ಹೈರಾಣು ಮಾಡಿದ್ದರೆ, ಜಿಲ್ಲೆಯ ರೈತರು ಹೆಚ್ಚಿನ ಮಳೆಯಿಂದಾಗಿ ಕಂಗಾಲಾಗಿದ್ದಾರೆ. ಹೆಸರು ಹಾಗೂ ಶೇಂಗಾ ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿದೆ. ಇದು ಜಿಲ್ಲೆಯ ರೈತರನ್ನು ಚಿಂತೆಗೀಡು ಮಾಡಿದೆ.
ಈ ಬಾರಿ ಕೊಪ್ಪಳ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇಕಡಾ 42 ರಷ್ಟು ಹೆಚ್ಚು ಮಳೆಯಾಗಿದ್ದರಿಂದ ರೈತರು ಖುಷಿಯಿಂದ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಜಿಲ್ಲೆಯಲ್ಲಿ 19,920 ಹೆಕ್ಟರ್ ಪ್ರದೇಶದಲ್ಲಿ ಹೆಸರು, 2,090 ಹೆಕ್ಟರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲಾಗಿದೆ. ಈಗಾಗಲೇ ಬೆಳೆ ಬೆಳೆಯಲಾರಂಭಿಸಿದ್ದು, ಅಗತ್ಯಕ್ಕಿಂತ ಹೆಚ್ಚು ಮಳೆಯಾಗಿರುವುದರಿಂದ ತೇವಾಂಶ ಹೆಚ್ಚಾಗಿ ಬೆಳೆಗೆ ಹಳದಿ ರೋಗ ಬಾಧಿಸುತ್ತಿದೆ.
ಪ್ರತಿ ಎಕರೆಗೆ ಬಿತ್ತನೆ, ಔಷಧಿ, ಗೊಬ್ಬರ ಸೇರಿದಂತೆ ಸುಮಾರು 20 ರಿಂದ 25 ಸಾವಿರ ರೂಪಾಯಿ ಖರ್ಚು ಮಾಡಲಾಗಿದೆ. ಆದರೆ ಹಳದಿ ರೋಗ ಬಾಧಿಸುತ್ತಿರುವುದರಿಂದ ರೈತರಿಗೆ ಒಂದು ಕ್ವಿಂಟಲ್ ಫಸಲು ಸಹ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಏಷ್ಟೇ ಔಷಧಿ ಸಿಂಪಡಣೆ ಮಾಡಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಇದರಿಂದಾಗಿ ಸಾಲಸೂಲ ಮಾಡಿ ಉತ್ತಮ ಫಸಲು ಬರುವ ನಿರೀಕ್ಷೆಯಲ್ಲಿದ್ದ ರೈತರಿಗೆ ಅಧಿಕ ಮಳೆ ಕಣ್ಣಲ್ಲಿ ನೀರು ಬರುವಂತೆ ಮಾಡಿದೆ.
ಈ ಕುರಿತು ಸರ್ಕಾರ ಸಮೀಕ್ಷೆ ಮಾಡಿ ರೈತರಿಗೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿ ಎದುರಾಗುತ್ತದೆ ಎಂದು ಸ್ಥಳೀಯ ರೈತರು ಮನವಿ ಮಾಡಿದ್ದಾರೆ.