ಕುಷ್ಟಗಿ: ಇಲ್ಲಿನ ಕೃಷ್ಣಗಿರಿ ಕಾಲೋನಿ ಬಳಿ ರಾಷ್ಟ್ರೀಯ ಹೆದ್ದಾರಿಯ ಅಂಡರ್ ಪಾಸ್ನ ಪಾದಚಾರಿ ಮಾರ್ಗದಲ್ಲಿ ಮೇಲ್ಛಾವಣಿ ಇಲ್ಲದಿರವ ಹಿನ್ನೆಲೆ ಮಳೆ ನೀರು ಜಮೆಯಾಗಿ ರಸ್ತೆ ಗಬ್ಬೆದ್ದು ನಾರುತ್ತಿದೆ.
ವಾಹನಗಳ ಸುಗಮ ಸಂಚಾರ ಹಾಗೂ ಜನರ ಸುರಕ್ಷತೆ ಹಿನ್ನೆಲೆ ಅಂಡರ್ ಪಾಸ್ ನಿರ್ಮಿಸಲಾಗಿದೆ. ಆದರೆ ಈಗ ಜನರ ಸುರಕ್ಷತೆಗಿಂತ ಅಸುರಕ್ಷತೆ ಹೆಚ್ಚಾಗಿ ಕಾಡುತ್ತಿದೆ. ಹೆದ್ದಾರಿ ಗುತ್ತಿಗೆ ವಹಿಸಿಕೊಂಡಿರುವ ಒಎಸ್ಇ ಸಂಸ್ಥೆ ಅಂಡರ್ ಪಾಸ್ನಲ್ಲಿ ಜಮೆಯಾದ ನೀರನ್ನು ತೆರವುಗೊಳಿಸದೆ ಇರುವುದರಿಂದ ಸಂಚಾರಿಗಳು ಪರದಾಡುವಂತಾಗಿದೆ. ಅಲ್ಲದೇ ಕೆಲ ಕಿಡಿಗೇಡಿಗಳು ಇದರಲ್ಲಿ ಮೂತ್ರ, ಕುಡಿದ ಮದ್ಯದ ಬಾಟಲಿಗಳನ್ನು ಒಡೆದು ಹಾಕಿ ವಿಕೃತಿ ಮೆರೆಯುತ್ತಿದ್ದಾರೆ.
ಕೂಡಲೇ ಈ ಅವಸ್ಥೆಯನ್ನು ಸರಿಪಡಿಸಬೇಕೆಂದು ಕೃಷ್ಣಗಿರಿ ನಿವಾಸಿಗಳು ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿದ್ದಾರೆ.