ಗಂಗಾವತಿ: ಪ್ರತಿ ವರ್ಷಕ್ಕಿಂತಲೂ ಈ ವರ್ಷ ತುಂಗಭದ್ರಾ ಜಲಾಶಯ ಬಹುಬೇಗನೇ ಭರ್ತಿಯಾಗಿರುವ ಹಿನ್ನೆಲೆ ಸಂತಸಗೊಂಡ ಕರ್ನಾಟಕ ರೈತ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು, ರೈತ ಸಮುದಾಯ ಪರವಾಗಿ ನದಿಗೆ ಬಾಗಿನ ಅರ್ಪಿಸಿದರು.
ಇಲ್ಲಿನ ಚಿಕ್ಕಜಂತಕಲ್ ಸಮೀಪ ಇರುವ ಕಂಪ್ಲಿ ಸೇತುವೆಗೆ ತೆರಳಿದ ಸಂಘಟನೆಯ ಪದಾಧಿಕಾರಿಗಳು, ತುಂಬಿದ ನದಿಗೆ ಬಾಗಿನ ಅರ್ಪಿಸಿದರು.
ಬಳಿಕ ಮಾತನಾಡಿದ ಸಂಘಟನೆಯ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಶರಣೇಗೌಡ ಕೇಸರಹಟ್ಟಿ, ಜಲಾಶಯ ತುಂಬಿರುವುದು ರೈತರಲ್ಲಿ ಹರ್ಷ ಮನೆ ಮಾಡಿದೆ.
ಎರಡನೇ ಬೆಳೆಗೆ ನೀರು ಸಿಗುವುದು ಎಂಬ ಆಶಾ ಭಾವನೆ ರೈತರಲ್ಲಿ ಮನೆ ಮಾಡಿದೆ. ಈಗಾಗಲೆ ಭತ್ತದ ನಾಟಿ ಆರಂಭವಾಗಿದ್ದು, ಇನ್ನೆರಡು ಮೂರು ತಿಂಗಳಲ್ಲಿ ಮೊದಲ ಬೆಳೆ ಕೈ ಸೇರಲಿದೆ. ಹೀಗಾಗಿ ಜಲಾಶಯದಲ್ಲಿರುವ ಇರುವ ನೀರನ್ನು ಅಧಿಕಾರಿಗಳು ವಿವೇಚನೆಯುಕ್ತವಾಗಿ ಬಳಸಿ ಎರಡನೇ ಬೆಳೆಗೆ ನೀರು ಬಿಡಬೇಕು ಎಂದರು.
ಸಂಘಟನೆಯ ಪದಾಧಿಕಾರಿಗಳಾದ ಬರಗೂರು ನಾಗರಾಜ್, ಬಸವರಾಜ ಹಳ್ಳಿ, ಪಂಪಯ್ಯಸ್ವಾಮಿ ಹಿರೇಮಠ, ದೇವೇಂದ್ರಗೌಡ, ಶಿಶಿಧರ, ಚನ್ನಬಸವ ಹೇರೂರು ಇತರರು ಪಾಲ್ಗೊಂಡಿದ್ದರು.