ಗಂಗಾವತಿ: ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಕೂಲಿ ಕಾರ್ಮಿಕರಿಗೆ ಆರ್ಥಿಕ ಸಂಕಷ್ಟ ಎದುರಾಗದಂತೆ ನೋಡಿಕೊಳ್ಳಲು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ನಾನಾ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದಾರೆ.
ತಾಲೂಕಿನ ವೆಂಕಟಗಿರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಠಲಾಪುರ ಕೆರೆಯ ಹೂಳೆತ್ತುವುದು, ದಾಸನಾಳ ಗ್ರಾಮದ ಉಪ ಕಾಲುವೆಯ ಹೂಳು ತೆಗೆಯುವುದು ಸೇರಿದಂತೆ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೆಲಸ ಕೊಡುವ ಮೂಲಕ ಕಾರ್ಮಿಕರ ನೆರವಿಗೆ ಬಂದಿದ್ದಾರೆ.
ತಾಲೂಕು ಪಂಚಾಯತ್ ಸಿಇಒ ಡಾ.ಡಿ.ಮೋಹನ್ ನೇತೃತ್ವದಲ್ಲಿ ನರೇಗಾ ಕಾಮಗಾರಿಗಳನ್ನು ಆರಂಭಿಸಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮತ್ತು ಕಡ್ಡಾಯ ಮಾಸ್ಕ್ ಧರಿಸುವಂತೆ ಕಾರ್ಮಿಕರಿಗೆ ಸೂಚಿಸಲಾಗಿದೆ. ಅಲ್ಲದೆ, ಕಾರ್ಮಿಕರಿಗೆ ಸ್ಯಾನಿಟೈಸರ್, ನೆರಳಿನ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಪಂಚಾಯತ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.