ಕೊಪ್ಪಳ: ಸಾಮಾನ್ಯವಾಗಿ ಕಾಗೆ ಬಣ್ಣ ಕಪ್ಪು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಕೊಪ್ಪಳದಲ್ಲಿ ಬಿಳಿ ಬಣ್ಣದ ಕಾಗೆಯೊಂದು ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದೆ.
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬಸವಣ್ಣ ಕ್ಯಾಂಪ್ನಲ್ಲಿ ಬಿಳಿ ಬಣ್ಣದ ಕಾಗೆಯೊಂದು ಕಾಣಿಸಿಕೊಂಡಿದ್ದು ಅಚ್ಚರಿಗೆ ಕಾರಣವಾಗಿದೆ. ಬಸವಣ್ಣ ಕ್ಯಾಂಪ್‌ನ ನಿವಾಸಿ ಮತ್ತಿಪಾಟಿ ಕೃಷ್ಣ ಎಂಬುವವರ ಜಮೀನಿನಲ್ಲಿ ಈ ಬಿಳಿ ಬಣ್ಣದ ಕಾಗೆ ಕಾಣಿಸಿಕೊಂಡಿದೆ.
ಜಮೀನಿನ ಮರವೊಂದರಲ್ಲಿ ಈ ಬಿಳಿ ಕಾಗೆ ಗೂಡು ಕಟ್ಟಿಕೊಂಡಿತ್ತು. ಬಿಳಿ ಕಾಗೆಯನ್ನು ಕಂಡ ಕೃಷ್ಣ ಅದನ್ನು ಮನೆಗೆ ತೆಗೆದುಕೊಂಡು ಬಂದಿದ್ದಾರೆ. ಕಾಗೆ ಬಣ್ಣ ಬಿಳಿಯಾಗಿರುವುದರಿಂದ ಅದು ಕಾಗೆ ಹೌದೋ ಅಲ್ಲವೋ ಎಂಬ ಅನುಮಾನ ಮೂಡಿಸುತ್ತದೆ. ಆದರೆ ಅದು ಕೂಗುವ ಧ್ವನಿಯಿಂದ ಅದು ಕಾಗೆ ಎಂಬುದನ್ನು ಖಾತ್ರಿಪಡಿಸುತ್ತದೆ. ಇಂತಹ ಅಪರೂಪದ ಬಿಳಿ ಕಾಗೆಯನ್ನು ಕಂಡು ಸ್ಥಳೀಯರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.