ಕೊಪ್ಪಳ: ನಾವೆಲ್ಲೂ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿಲ್ಲ. ನಮ್ಮ ಪಕ್ಷದ ಮುಖಂಡರಲ್ಲಿ ಯಾರಾದರೂ ಪ್ರಧಾನಿಯಾಗಬಹುದು ಎಂದು ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಅನಿಲ್ ಲಾಡ್ ಹೇಳಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅನಿಲ್ ಲಾಡ್, ರಾಹುಲ್ ಗಾಂಧಿ ಅವರು ಪ್ರಧಾನ ಮಂತ್ರಿ ಆಗಬೇಕು ಎಂಬುದು ನಮ್ಮ ಅಪೇಕ್ಷೆ. ಆದರೆ, ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ನಾವು ಎಲ್ಲೂ ಘೋಷಣೆ ಮಾಡಿಲ್ಲ. ಅದನ್ನು ಪಕ್ಷ ಆ ಸಂದರ್ಭದಲ್ಲಿ ತೀರ್ಮಾನ ಮಾಡುತ್ತದೆ. ಸಮಯ ಬಂದರೆ ಸಿದ್ದರಾಮಯ್ಯ, ಮನಮೋಹನ್ ಸಿಂಗ್, ಮಲ್ಲಿಕಾರ್ಜುನ್ ಖರ್ಗೆ, ಎ.ಕೆ.ಆ್ಯಂಟನಿ ಸೇರಿದಂತೆ ಯಾರಾದರೂ ಪ್ರಧಾನಿಯಾಗಬಹುದು. ರಾಹುಲ್ ಗಾಂಧಿ ಅವರ ಅಜ್ಜಿ, ಅವರ ತಂದೆ ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ರಾಹುಲ್ ಗಾಂಧಿ ಅವರು ಕಿರಿಯ ವಯಸ್ಸಿನಲ್ಲಿ ರಾಜಕಾರಣಕ್ಕೆ ಬಂದಿದ್ದಾರೆ. ಮೋದಿ ಅವರು 15 ವರ್ಷ ಸಿಎಂ ಆಗಿ ಆಡಳಿತ ಮಾಡಿದ್ದಾರೆ. ಅವರಂತೆ ಮಾತನಾಡುವ ಹಾಗೂ ಸುಳ್ಳು ಹೇಳುವ ಕಲೆಯನ್ನು, ಅನುಭವವನ್ನು ರಾಹುಲ್ ಗಾಂಧಿ ಹೊಂದಿಲ್ಲ. ಕಳೆದ ಬಾರಿ ಮೋದಿ ಜನರಿಗೆ ಸಾಕಷ್ಟು ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದರು. ಕಪ್ಪು ಹಣವನ್ನು ತರುತ್ತೇನೆ. ಪ್ರತಿಯೊಬ್ಬರಿಗೂ 15 ಲಕ್ಷ ರೂಪಾಯಿ ಜನ್ಧನ್ ಅಕೌಂಟ್ಗೆ ಹಾಕುತ್ತೇನೆ ಎಂದು ಹೇಳಿದ್ದರು. ಹಣ ಹಾಕಲಿಲ್ಲ. ಈ ಬಾರಿ ಒಂದು ವೇಳೆ ಪುಲ್ವಾಮಾ ಘಟನೆ ನಡೆಯದಿದ್ದರೆ ಮೋದಿ ಯಾವ ವಿಷಯವನ್ನಿಟ್ಟುಕೊಂಡು ಚುನಾವಣೆಗೆ ಹೋಗುತ್ತಿದ್ದರು ಎಂದು ಅನಿಲ್ ಲಾಡ್ ಪ್ರಶ್ನೆ ಮಾಡಿದರು.
ನಾನು ಕೊಪ್ಪಳಕ್ಕೆ ಸಮುದಾಯದ ಜನರನ್ನು ಭೇಟಿ ಮಾಡಿ ತುಳಜಾ ಭವಾನಿ ದೇವಸ್ಥಾನ ದರ್ಶನಕ್ಕೆ ಬಂದಿದ್ದೇನೆ. ಹಾಗೆಯೇ ನಮ್ಮ ಮೈತ್ರಿ ಅಭ್ಯರ್ಥಿಯ ಪರ ಮತಯಾಚಿಸಿದೆ ಎಂದರು. ಒಂದು ವೇಳೆ ಮಹಾಘಟ್‌ಬಂಧನ್ ಅಧಿಕಾರಕ್ಕೆ ಬಂದರೆ ಮಹಾಘಟ್ಬಂಧನ್ದ ಯಾವುದೇ ನಾಯಕರಾದರೂ ಪ್ರಧಾನಮಂತ್ರಿ ಆಗಬಹುದು ಎಂದು ತಿಳಿಸಿದರು.