ಕೊಪ್ಪಳ: ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಸುವ ಸಲುವಾಗಿ ಕೊಪ್ಪಳ ಸಂಸದ ಸಂಗಣ್ಣ ಕರಡಿ ಹಾಗೂ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಪ್ರತ್ಯೇಕವಾಗಿ ಎರಡು ಬಾರಿ ಚಾಲನೆ ನೀಡಿದ್ದಾರೆ.
ಕಳೆದ ತಿಂಗಳು ಕೊಪ್ಪಳ ತಾಲೂಕಿನ ಮುನಿರಾಬಾದ್ ಕಾಡಾ ಕಚೇರಿಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಿದಂತೆ ಇಂದು ಎಡದಂಡೆ ನಾಲೆಗೆ ನೀರು ಹರಿಸಬೇಕಿತ್ತು. ಅದರಂತೆ ಇಂದು ಬೆಳಗ್ಗೆ ಮೊದಲು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಪೂಜೆ ಸಲ್ಲಿಸಿ ಚಾಲನೆ ನೀಡಿದ್ದರು.
ಇದಾದ ಬಳಿಕ ಕೆಲ ಹೊತ್ತಿಗೆ ಆಗಮಿಸಿದ ಸಂಸದ ಸಂಗಣ್ಣ ಕರಡಿ, ಮುನಿರಾಬಾದ್ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಅವರು ಸಹ ಪ್ರತ್ಯೇಕವಾಗಿ ಪೂಜೆ ನಡೆಸಿ ಮತ್ತೊಮ್ಮೆ ಚಾಲನೆ ನೀಡಿದರು. ಸಂಸದ, ಶಾಸಕ ಇಬ್ಬರು ಪ್ರತ್ಯೇಕವಾಗಿ ಒಂದೇ ನಾಲೆಗೆ ನೀರು ಬಿಡುವುದಕ್ಕೆ ಎರಡು ಬಾರಿ ಚಾಲನೆ ನೀಡಿರುವ ಘಟನೆ ಚರ್ಚೆಗೆ ಇಂಬು ನೀಡಿತು.
ಇದನ್ನೂ ಓದಿ: ಕೆಆರ್ಎಸ್ ತುಂಬಲು ಒಂದೇ ಅಡಿ ಬಾಕಿ.. ರಾಜ್ಯದ ಇತರೆ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ
ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರ ಇಂದಿನ ನಡೆಯ ಬಗ್ಗೆ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ ಕಾಡಾ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಮುನಿರಾಬಾದ್ ಕಾಡಾ ಕಚೇರಿ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.