ಗಂಗಾವತಿ : ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಚುಕ್ಕಾಣಿ ಹಿಡಿದ ಬಳಿಕ ಭಾರತ ಆಂತರಿಕ, ಆರ್ಥಿಕ, ರಕ್ಷಣಾತ್ಮಕವಾಗಿ ಬಲಾಢ್ಯವಾಗಿದೆ. ಹೀಗಾಗಿ 2024ರ ಲೋಕಸಭೆಯ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮೋದಿ ಮಗದೊಮ್ಮೆ ಪ್ರಧಾನಿಯಾಗಬೇಕು ಎಂದು ಹರಕೆ ಹೊತ್ತ ಯುವಕನೊಬ್ಬ ಗಂಗಾವತಿಯಿಂದ ಕೇರಳ ರಾಜ್ಯದ ಶಬರಿಮಲೆಗೆ ಪಾದಯಾತ್ರೆ ಕೈಗೊಂಡಿದ್ದಾರೆ.
ಗಂಗಾವತಿಯ ಹಿರೇಜಂತಕಲ್ನ ನಿವಾಸಿ ಪ್ರದೀಪ್ ದೇವರಶೆಟ್ಟಿ ಪಾದಯಾತ್ರೆ ಹಮ್ಮಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ನಗರದ ಖಾಸಗಿ ಆಸ್ಪತ್ರೆಯ ಲ್ಯಾಬ್ ಟೆಕ್ನಿಶಿಷಿಯನ್ ಹಾಗೂ ಅದರ ಮಾಲೀಕರಾಗಿರುವ ಪ್ರದೀಪ್ ದೇವರಶೆಟ್ಟಿ ಬಿಜೆಪಿ ಕಾರ್ಯಕರ್ತನಲ್ಲ, ಅಭಿಮಾನಿಯೂ ಅಲ್ಲ. ಆದರೆ ದೇಶಕ್ಕಾಗಿ ಮೋದಿ ಸಲ್ಲಿಸುತ್ತಿರುವ ಅನುಪಮ ಸೇವೆ ಅನುಲಕ್ಷಿಸಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಬಯಕೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿದ್ದಾರೆ.
ಪ್ರದೀಪ್ ಅವರು ಗುರುವಾರ ಆರಂಭಿಸಿದ ಪಾದಯಾತ್ರೆಗೆ ನಗರದ ಚನ್ನಬಸವ ಸ್ವಾಮಿ ತಾತನ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಂಗಾಪುರದ ಗುರುಸ್ವಾಮಿ ತಾತಯ್ಯ ಬೀಳ್ಕೊಟ್ಟರು. ಚಿತ್ರದುರ್ಗ, ಬೆಂಗಳೂರು ಮೂಲಕ ಸಾಗಿ ತಮಿಳುನಾಡಿನ ದಿಂಡಿಗಲ್ ಸೇಲಂ ಬಳಸಿಕೊಂಡು ಕೊನೆಗೆ ಕೇರಳದ ಶಬರಿಮಲೆಗೆ ಪಾದಯಾತ್ರೆ ಮಾಡಲಿದ್ದಾರೆ. ನಿತ್ಯ 30 ರಿಂದ 35 ಕಿ.ಮೀ ಪಾದಯಾತ್ರೆ ಮಾಡಿಲಿದ್ದಾರೆ ಎಂದು ಸಂಘಟಕ ಪಂಪಾಪತಿ ಹಾಗೂ ದೇವಾಂಗ ಗುರು ತಿಳಿಸಿದ್ದಾರೆ.
ಶಬರಿಮಲೆಯಲ್ಲಿ ಜ್ಯೋತಿ ದರ್ಶನ ಪಡೆಯಲು ಪಾದಯಾತ್ರೆ : ಈಗಾಗಲೇ ಮತ್ತೊಂದೆಡೆ ಬುಧವಾರ ನಗರದ ಹತ್ತಕ್ಕೂ ಹೆಚ್ಚು ಅಯ್ಯಪ್ಪನ ಭಕ್ತರು, ಕೇವಲ ಕಾಲ್ನಡಿಗೆಯ ಮೂಲಕವೇ 1050 ಕಿ.ಮೀ. ದೂರದಲ್ಲಿರುವ ಶಬರಿಮಲೆಗೆ ಪಾದಯಾತ್ರೆ ಆರಂಭಿಸಿದ್ದಾರೆ. ಕಿರಣ್ ಕುಮಾರ ಈಡಿಗ ಎಂಬ ಗುರುಸ್ವಾಮಿ ನೇತೃತ್ವದಲ್ಲಿ ನಗರದ ಹನುಮೇಶ ತೆಗ್ಗಿನಮನಿ, ರಾಜಾಸಿಂಗ್, ಮೋಹನ್ ನಾಯಕ್, ಚೇತನ ಕುಮಾರ್, ಚಿಕ್ಕಮಾದಿನಾಳ ಶೇಖರಗೌಡ, ಸಂಗಾಪುರ ವೀರಣ್ಣ, ಭೀಮೇಶ, ಹೇಮಂತ ಹಗರಿಬೊಮ್ಮನಹಳ್ಳಿ, ಗುರು ಪಾದಯಾತ್ರೆ ಕೈಗೊಂಡಿದ್ದಾರೆ.
ಕಿರಣ್ಕುಮಾರ್ ಈಡಿಗ ಗುರುಸ್ವಾಮಿಗೆ ಇದು ಆರನೇ ವರ್ಷದ ಕಾಲ್ನಡಿಗೆ ಪಾದಯಾತ್ರೆಯಾಗಿದ್ದು, ಹನುಮೇಶ ತೆಗ್ಗಿನಮನಿ ಎರಡನೇ ವರ್ಷದ ಪಾದಯಾತ್ರೆಯಾಗಿದೆ. ಸ್ವಾಮಿಗಳು ದಿನಕ್ಕೆ 35 ರಿಂದ 40 ಕಿ.ಮೀ ಪಾದಯಾತ್ರೆ ಮಾಡುತ್ತಿದ್ದಾರೆ. 1050 ಕಿ.ಮೀ. ಅಂತರದ ಯಾತ್ರೆಯನ್ನು 28 ದಿನದಲ್ಲಿ ಮುಗಿಸುವ ಸಂಕಲ್ಪದೊಂದಿಗೆ ತೆರಲಿದ್ದಾರೆ. ಜ.15ರಂದು ಶಬರಿಮಲೆ ಬೆಟ್ಟದಲ್ಲಿ ಕಾಣಿಸಿಕೊಳ್ಳಲಿರುವ ಜ್ಯೋತಿಯ ದರ್ಶನ ಮಾಡಿಕೊಂಡು ಯಾತ್ರಾರ್ಥಿಗಳು ವಾಪಾಸ್ ಬರಲಿದ್ದಾರೆ.
ತಲೆಯ ಮೇಲೆ ಕೇವಲ ಇರುಮುಡಿ ಹೊತ್ತುಕೊಂಡು ಹೋಗುತ್ತಿರುವ ಯಾತ್ರಾರ್ಥಿಗಳಿಗೆ, ದಾರಿ ಉದ್ದಕ್ಕೂ ಅಲ್ಲಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಪೀಠದಲ್ಲಿ, ಭಕ್ತರು ತಮ್ಮ ಮನೆಯಲ್ಲಿ ಊಟ, ಉಪಹಾರ ಮತ್ತು ರಾತ್ರಿ ತಂಗುವ ವ್ಯವಸ್ಥೆ ಮಾಡುತ್ತಿದ್ದಾರೆ. ದಾರಿ ಮಧ್ಯೆ ಸಿಗುವ ಹೊಟೇಲ್ಗಳಲ್ಲಿ ತಮ್ಮ ಬಳಿ ಇರುವ ನೀರಿನ ಬಾಟಲಿಯಲ್ಲಿ ತುಂಬಿಸಿಕೊಳ್ಳುತ್ತಾರೆ. ಬೆಳಗ್ಗೆ ನಾಲ್ಕು ಗಂಟೆಗೆ ಆರಂಭವಾಗುವ ಕಾಲ್ನಡಿಗೆ ಬೆಳಗ್ಗೆ ಹತ್ತಕ್ಕೆ ಮುಗಿಸಲಾಗುತ್ತಿದೆ. ಉಪಹಾರ ಸೇವಿಸಿ ವಿಶ್ರಾಂತಿ ಪಡೆಯುವ ಭಕ್ತರು ಬಳಿಕ ಮಧ್ಯಾಹ್ನ ಮೂರು ಗಂಟೆಯಿಂದ ಕಾಲ್ನಡಿಗೆ ಆರಂಭಿಸಿ ಆರು ಗಂಟೆಗೆ ಮುಗಿಸಿ ವಿಶ್ರಾಂತಿ ಪಡೆಯುತ್ತಾರೆ. ಹೀಗೆ ದಿನಕ್ಕೆ 35 ರಿಂದ 40 ಕಿ.ಮೀ ಸರಾಗವಾಗಿ ಹೋಗುತ್ತಿದ್ದಾರೆ.
ಇದನ್ನೂ ಓದಿ : ಗಂಗಾವತಿ: ಅಯ್ಯಪ್ಪನ ದರ್ಶನಕ್ಕಾಗಿ ಶಬರಿಮಲೆಗೆ 1050 ಕಿ.ಮೀ ಪಾದಯಾತ್ರೆ