ಕೊಪ್ಪಳ: ಜಿಲ್ಲೆಯ ಶಕ್ತಿದೇವತೆ ಹುಲಿಗೆಮ್ಮದೇವಿಯ ಮಹಿಮೆಯನ್ನ ಬೆಳ್ಳಿ ತೆರೆಯಮೇಲೆ ತರಲು ಸಿನೆಮಾ ನಿರ್ದೇಶಕ ಓಂ ಪ್ರಕಾಶ್ ಸಜ್ಜಾಗಿದ್ದಾರೆ. ಇಂದು ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಸಿನಿಮಾ ಚಿತ್ರೀಕರಣಕ್ಕೆ ಚಾಲನೆ ನೀಡಲಾಯಿತು. ವಿಶ್ವರೂಪಿಣಿ ಶ್ರೀಹುಲಿಗೆಮ್ಮದೇವಿ ಹೆಸರಿನ ಸಿನಿಮಾಕ್ಕೆ ಹೊಸಪೇಟೆಯ ಕವಿತಾ ಸಿಂಗ್ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರು.
ಓಂ ಸಾಯಿ ಪ್ರಕಾಶ್ ನಿರ್ದೇಶನದ ಈ ಚಿತ್ರದಲ್ಲಿ ನಟಿ ಪ್ರಿಯಾಂಕ ಉಪೇಂದ್ರ ಹುಲಿಗೆಮ್ಮ ದೇವಿ ಪಾತ್ರ ಮಾಡುತ್ತಿದ್ದಾರೆ. ಬಹುದೊಡ್ಡ ತಾರಾಬಳಗ ಹೊಂದಿರುವ ಈ ಸಿನಿಮಾದ ಚಿತ್ರೀಕರಣ ಹುಲಿಗಿಯಲ್ಲಿ 15 ದಿನಗಳ ಕಾಲ ನಡೆಯಲಿದೆ. ಚಿತ್ರೀಕರಣದಲ್ಲಿ ನಟ ಉಪೇಂದ್ರ ಸಹ ಭಾಗಿಯಾಗಲಿದ್ದಾರೆ.
"ಶ್ರೀ ಹುಲಿಗೆಮ್ಮ ದೇವಿ ದೇವಿಯ ಬಗ್ಗೆ ಸಾಕಷ್ಟು ಕೇಳಿದ್ದೇನೆ. ಮೊದಲ ಬಾರಿ ಭಕ್ತಿ ಪ್ರಧಾನ ಸಿನಿಮಾದಲ್ಲಿ ಅಭಿನಯಿಸುತ್ತಿದ್ದೇನೆ. ಈಗಾಗಲೇ ಹಾರರ್, ಮಾಸ್, ಕೌಟುಂಬಿಕ ಕಾಮಿಡಿ ಸಿನಿಮಾ ಮಾಡಿದ್ದೆ. ಈಗ ಹುಲಿಗೆಮ್ಮ ದೇವಿ ಪಾತ್ರ ಮಾಡುತ್ತಿದ್ದೇನೆ. ಈ ಸಿನಿಮಾ ಯಶಸ್ವಿಯಾಗಲಿದೆ ಎಂದು ನಂಬಿದ್ದೇನೆ" ಎಂದು ನಟಿ ಪ್ರಿಯಾಂಕ ಉಪೇಂದ್ರ ಹೇಳಿದರು.
ನಿರ್ದೇಶಕ ಓಂ ಸಾಯಿ ಪ್ರಕಾಶ್ ಮಾತನಾಡಿ, ಇದು ನನ್ನ ನಿರ್ದೇಶನದ 105ನೇ ಸಿನಿಮಾ. ಈಗಾಗಲೇ ಪೌರಾಣಿಕ, ಸಂಸಾರಿಕ ಸಿನಿಮಾ ಮಾಡಿರುವ ನಾನು ಈಗ ಹುಲಿಗೆಮ್ಮ ದೇವಿ ಚಿತ್ರ ಮಾಡುತ್ತಿದ್ದೇನೆ. ಉತ್ತರ ಕರ್ನಾಟಕ ಜನರು ಭಕ್ತಿ ಪ್ರಧಾನ ಸಿನೆಮಾಗಳನ್ನ ಹೆಚ್ಚು ಇಷ್ಟಪಡುತ್ತಾರೆ. ಹಾಗಾಗಿ ಬಹಳಷ್ಟು ಭರವಸೆ ಇಟ್ಟುಕೊಂಡಿರುವ ಚಿತ್ರ ಇದಾಗಿದೆ. ಪ್ಯಾನ ಇಂಡಿಯಾ ಎಂಬ ಹೆಸರಿನಲ್ಲಿ ಬಹುಕೋಟಿ ಬಜೆಟ್ ಸಿನಿಮಾ ಇದಲ್ಲ. ಕನ್ನಡದಿಂದ ತೆಲುಗು, ಹಿಂದಿ, ತಮಿಳು ಮರಾಠಿಯಲ್ಲಿ ಡಬ್ ಮಾಡಲಾಗುವುದು. ಯಶಸ್ಸು ಸಿಗುವ ಭರವಸೆ ಇದೆ ಎಂದರು.
ಇದನ್ನೂ ಓದಿ: 'ಡಿಟೆಕ್ಟಿವ್ ತೀಕ್ಷ್ಣ'ಳಾಗಿ ಬದಲಾದ ನಟಿ ಪ್ರಿಯಾಂಕಾ: ಪತ್ತೇದಾರಿ ಪಾತ್ರದಲ್ಲಿ ಉಪ್ಪಿ ಪತ್ನಿ