ಗಂಗಾವತಿ/ದೇವನಹಳ್ಳಿ/ವಿಜಯಪುರ: ವಾಯುವಿಹಾರಕ್ಕೆ ಹೋದವರಿಗೆ ಆಕಾಶದಲ್ಲಿ ಟಾರ್ಚ್ ಮಾದರಿಯಲ್ಲಿ ವಿಶೇಷ ರೀತಿಯ ಪ್ರಕಾಶಮಾನವಾದ ಬೆಳಕು ಕಂಡು ಬಂದಿದೆ. ಇದೇ ರೀತಿಯ ಬೆಳಕು ರಾಜ್ಯದ ವಿವಿಧೆಡೆ ಕಾಣಿಸಿರುವ ಬಗ್ಗೆ ವರದಿಯಾಗಿದೆ.
ಗಂಗಾವತಿಯ ಜಯನಗರ ಸಮೀಪದ ವಿದ್ಯಾಗಿರಿ ಬೆಟ್ಟಕ್ಕೆ ವಾಯುವಿಹಾರಕ್ಕೆ ಹೋದವರು ಬೆಳಗ್ಗೆ ಆರು ಗಂಟೆಯ ಸುಮಾರಿಗೆ ಆಗಸದಲ್ಲಿ ಈ ವಿಸ್ಮಯ ನೋಡಿದ್ದಾರೆ. ಮೊದಲಿಗೆ ಟಾರ್ಚ್ ಮಾದರಿಯಲ್ಲಿ ಬೆಳಕು ಒಂದು ರಂಧ್ರದಂತಹ ಕಿಂಡಿಯಿಂದ ಬರುವಂತೆ ಗೋಚರಿಸುತ್ತಿತ್ತು. ಬಳಿಕ ಅದು ಜಿಗ್‌ಜಾಗ್ ಮಾದರಿಗೆ ಜಾರಿತ್ತು. ಸುಮಾರು ನಾಲ್ಕೈದು ನಿಮಿಷ ಈ ದೃಶ್ಯ ಕಂಡುಬಂದಿದೆ ಎಂದು ವಾಯುವಿಹಾರಕ್ಕೆ ಬಂದಿದ್ದ ಯುವಕ ಚೇತನ್ ಮುದ್ಗಲ್ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೊಯಿರಾ ಗ್ರಾಮದಲ್ಲೂ ಕೂಡಾ ಆಕಾಶದಲ್ಲಿ ಅಪರೂಪದ ಬೆಳಕಿನ ರೂಪ ಕಂಡಿದ್ದು, ಗ್ರಾಮಸ್ಥರ ಅಚ್ಚರಿಗೆ ಕಾರಣವಾಗಿದೆ. ಹಾಗೆಯೇ, ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿಯೂ ಈ ವಿಸ್ಮಯ ಕಾಣ ಸಿಕ್ಕಿದೆ. ಇತರೆ ಹಲವೆಡೆ ಕೂಡಾ ನಿಗೂಢ ದೃಶ್ಯ ಕಂಡುಬಂದಿದ್ದು ಜನರನ್ನು ಚಕಿತಗೊಳಿಸಿದೆ.