ಗಂಗಾವತಿ: ಕೊರೊನಾ ಲಾಕ್ಡೌನ್ನಿಂದಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ನೆರವು ನೀಡುವಂತೆ ಮಂಗಳಮುಖಿಯರು ಶಾಸಕ ಪರಣ್ಣ ಮುನವಳ್ಳಿಗೆ ಮನವಿ ಸಲ್ಲಿಸಿದರು.
ಶಾಸಕರ ನಿವಾಸಕ್ಕೆ ಭೇಟಿ ನೀಡಿದ ಲೈಂಗಿಕ ಅಲ್ಪಸಂಖ್ಯಾತರು, ಕೊರೊನಾ ವೈರಸ್ನಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವರು ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ಭಿಕ್ಷಾಟನೆ ಮೂಲಕವೇ ಜೀವನ ನಡೆಸುತ್ತಿದ್ದ ನಾವು ಕೂಡ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ. ಜೀವನ ನಡೆಸುವುದೇ ದುಸ್ತರ ಎಂಬ ಸ್ಥಿತಿ ಎದುರಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಇದಕ್ಕೆ ಸ್ಪಂದಿಸಿದ ಶಾಸಕರು, ಪಡಿತರ ಚೀಟಿಯಡಿ ಬರುವ ಅಕ್ಕಿ, ಗೋಧಿ ಹೊರತುಪಡಿಸಿ ಇನ್ನುಳಿದ ಆಹಾರ ಪದಾರ್ಥಗಳನ್ನು ಒದಗಿಸುತ್ತೇವೆ. ಇದು ನನ್ನ ವೈಯಕ್ತಿಕ ನೆರವು ಎಂದರು.
ಶಾಸಕರ ಭರವಸೆಗೆ ಮಂಗಳಮುಖಿಯರು ಸಂತಸ ವ್ಯಕ್ತಪಡಿಸಿ, ಕೃತಜ್ಞತೆ ಸಲ್ಲಿಸಿದರು.