ಕೊಪ್ಪಳ: ರಾಜಕಾರಣಿಗಳ ಗ್ರಾಮವಾಸ್ತವ್ಯದಂತೆ ಸಾಹಿತಿಗಳು ಸಹ ಗ್ರಾಮವಾಸ್ತವ್ಯಕ್ಕೆ ಮುಂದಾಗುವ ಪ್ರಯತ್ನ ಕೊಪ್ಪಳದಲ್ಲಿ ನಡೆದಿದೆ.
ಸಾಹಿತ್ಯ ಅನ್ನುವಂಥದ್ದು ಜನರ ಆಂತರಿಕ ಭಾಷೆಯ ಪ್ರತಿರೂಪ. ಸಮಾಜದ ಮೇಲೆ ಪ್ರಭಾವ ಬೀರುವ ಈ ಸಾಹಿತ್ಯದ ಮೂಲಕವೇ ಜನರ ಭಾವನೆ-ಬವಣೆಯನ್ನು, ಸಮಸ್ಯೆಗಳನ್ನು ಬರವಣಿಗೆ ಮೂಲಕ ಬೆಳಕಿಗೆ ತರುವಂತಹ ವಿಶಿಷ್ಟ ಪ್ರಯತ್ನವೊಂದಕ್ಕೆ ಕೊಪ್ಪಳದ ವಕೀಲ ಹಾಗೂ ಸಾಹಿತಿಯಾಗಿರುವ ವಿಜಯ್ ಅಮೃತರಾಜ್ ಮುಂದಾಗಿದ್ದಾರೆ. ಇವರು ಸಾಹಿತಿಗಳ ಗ್ರಾಮವಾಸ್ತವ್ಯಕ್ಕೆ ಆರಂಭದ ಮುನ್ನುಡಿ ಬರೆದಿದ್ದಾರೆ.
ಗ್ರಾಮೀಣ ಪ್ರದೇಶಗಳ ಸಮಸ್ಯೆಗಳನ್ನು ಅರಿಯಲು ಹಾಗೂ ಅಲ್ಲೊಂದಿಷ್ಟು ಅಭಿವೃದ್ಧಿ ಕಾರ್ಯಗಳಾಗಬೇಕೆಂಬ ದೃಷ್ಟಿಯಿಂದ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಎಂಬ ಪರಿಕಲ್ಪನೆ ಮೂಲಕ ಜನಮನ್ನಣೆಗೆ ಪಾತ್ರರಾದರು. ಇವರಂತೆ ಸಾಹಿತಿಗಳು ಸಹ ಯಾಕೆ ಗ್ರಾಮ ವಾಸ್ತವ್ಯ ಮಾಡಬಾರದು ಎಂಬ ಧ್ಯೇಯದೊಂದಿಗೆ ವಿಜಯ್ ಅಮೃತರಾಜ್ ಅವರು ಪ್ರತಿ ತಿಂಗಳ ಎರಡನೇ ಶನಿವಾರದಂದು ಗ್ರಾಮ ವಾಸ್ತವ್ಯ ಮಾಡಲು ಮುಂದಾಗಿದ್ದಾರೆ.
ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಮಾಡಿ ಅಲ್ಲಿನ ಜನರೊಂದಿಗೆ ಮುಖಾಮುಖಿ ಚರ್ಚೆ ನಡೆಸಿ, ಅವರ ಭಾವನೆಗಳನ್ನು ಕೇಳಿ ಕಥೆ, ಕವನ, ಲೇಖನಗಳ ಮೂಲಕ ಅಭಿವ್ಯಕ್ತಪಡಿಸುವ ಮೂಲಕ ಅಧಿಕಾರಿಗಳ ಹಾಗೂ ಸರ್ಕಾರದ ಗಮನಕ್ಕೆ ತರುವ ಉದ್ದೇಶ ಇದರ ಹಿಂದಿದೆ.
ಸಾಹಿತಿಗಳು ಗ್ರಾಮವಾಸ್ತವ್ಯ ಮಾಡಿ ತಮ್ಮ ಬರವಣಿಗೆ ಮೂಲಕ ಜನರ ಭಾವನೆಯನ್ನು ಬಿಂಬಿಸುವ ಒಂದು ಹೊಸ ಪದ್ಧತಿಗೆ ವಿಜಯ್ ಅಮೃತರಾಜ್ ನಾಂದಿ ಹಾಡಿದ್ದಾರೆ. ಇದೊಂದು ಹೊಸ ಪರಿಕಲ್ಪನೆ ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ.