ಗಂಗಾವತಿ(ಕೊಪ್ಪಳ): ನಗರಕ್ಕೆ ಕುಡಿವ ನೀರು ಸರಬರಾಜು ಮಾಡುವ ಮುಖ್ಯ ಪೈಪ್ ರೈಸಿಂಗ್ ಲೈನ್ ಸ್ಫೋಟಗೊಂಡಿರುವ ಘಟನೆ ಕೇಂದ್ರ ಬಸ್ ನಿಲ್ದಾಣದ ಬಳಿ ಸಂಭವಿಸಿದೆ.
18 ಇಂಚು ಗಾತ್ರದ ಪೈಪಿನಲ್ಲಿ ನಿಮಿಷಕ್ಕೆ ಐನ್ನೂರಕ್ಕೂ ಹೆಚ್ಚು ಲೀಟರ್ ನೀರು ರಭಸದಿಂದ ಪೂರೈಕೆಯಾಗುತಿತ್ತು. ಮುಖ್ಯ ಪೈಪಿನಲ್ಲಿ ಸೋರಿಕೆ ಕಂಡು ಬಳಿಕ ಸ್ಫೋಟವಾಗಿದೆ. ನಗರದಲ್ಲಿ ಒಟ್ಟು ಮೂರು ಕಡೆ ಪೈಪ್ ಹಾನಿಯಾಗಿದ್ದು, ತಕ್ಷಣ ರೀಪೇರಿ ಕಾರ್ಯ ಕೈಗೊಳ್ಳಲಾಗಿದೆ. ಎರಡು ದಿನಗಳಿಂದ ನಗರದ ಕೆಲ ಭಾಗಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎಂದು ನಗರಸಭೆ ಸಿಬ್ಬಂದಿ ತಿಳಿಸಿದೆ. ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ ಪೌರಾಯುಕ್ತ ದೇವಾನಂದ ದೊಡ್ಮನಿ ಸ್ಥಳ ಪರಿಶೀಲಿಸಿ 24 ಗಂಟೆಯೊಳಗೆ ವ್ಯತ್ಯಯಗೊಂಡ ಸ್ಥಳಕ್ಕೆ ನೀರು ಪೂರೈಸಲಾಗುವುದು ಎಂದು ತಿಳಿಸಿದರು.