ಕೊಪ್ಪಳ: ಕೊರೊನಾ ಸೋಂಕು ಹರಡುತ್ತಿರುವ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದರಿಂದಾಗಿ ಬಹುತೇಕ ಜನರು ಅನೇಕ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾನಿಟೈಜರ್ ಬಳಕೆ, ಹ್ಯಾಂಡ್ ವಾಶ್ ಬಳಕೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಕಣ್ಣು, ಮೂಗು, ಬಾಯಿಯ ಬಳಿ ಕೈಗಳು ಹೋಗದಂತೆ ಕಂಟ್ರೋಲ್ ಮಾಡುವಂತೆ ತಜ್ಞರು ಸಲಹೆ ನೀಡ್ತಿದ್ದಾರೆ. ಆದರೂ ಕೆಲವೊಮ್ಮೆ ಅಚಾನಕ್ ಆಗಿ ಕೈಗಳು ಕಣ್ಣು, ಮೂಗು ಹಾಗೂ ಬಾಯಿ ಹತ್ತಿರ ಹೋಗುತ್ತಲೇ ಇರುತ್ತವೆ. ಕಣ್ಣು, ಮೂಗು, ಬಾಯಿ ಬಳಿ ಕೈಗಳು ಹೋಗದಂತೆ ರಿಮೈಂಡ್ ಮಾಡುವ ಉಪಕರಣವೊಂದನ್ನು ಗಂಗಾವತಿ ನಗರದ ಅಕ್ಬರ್ ಎಂಬ ಯುವಕ ಅಭಿವೃದ್ಧಿಪಡಿಸಿದ್ದಾನೆ. ಅದು ಕೆಟ್ಟು ಹೋದ ಬ್ಲೂಟೂತ್ ಮೂಲಕ ಎಂಬುದು ವಿಶೇಷ.
ಗಂಗಾವತಿ ನಗರದಲ್ಲಿ ಮೊಬೈಲ್ ಶಾಪ್ ಹೊಂದಿರುವ ಅಕ್ಬರ್ ಎಂಬ ಯುವಕ, ಬ್ಲೂಟೂತ್ ಡಿವೈಸ್ ಬಳಸಿಕೊಂಡು ರಿಮೈಂಡರ್ ತಯಾರಿಸಿದ್ದಾನೆ. ಕೆಟ್ಟು ಹೋದ ಬ್ಲೂಟೂತ್ ಡಿವೈಸ್ನ ಮದರ್ ಬೋರ್ಡ್ಗೆ ಮೊಬೈಲ್ ವೈಬ್ರೇಟರ್ ಅಳವಡಿಸಿದ್ದಾನೆ. ಈ ಡಿವೈಸ್ನ್ನು ಒಂದು ಬಟ್ಟೆಯ ಬೆಲ್ಟ್ ಮಾದರಿಯ ಪಟ್ಟಿಯಲ್ಲಿಕೊಂಡು ಕೈ ತೋಳಿಗೆ ಕಟ್ಟಿಕೊಳ್ಳಬೇಕು. ಕೈ ಮೇಲಕ್ಕೆ ಎತ್ತಿದಾಗ ರಟ್ಟೆಯಲ್ಲಿರುವ ಡಿವೈಸ್ ಸೆನ್ಸಾರ್ ಮೂಲಕ ವೈಬ್ರೇಟ್ ಮೂಲಕ ರಿಮೈಂಡ್ ಮಾಡುತ್ತದೆ.
ಈ ರಿಮೈಂಡರ್ನಿಂದಾಗಿ ನಮ್ಮ ಕೈಗಳನ್ನು ಕಣ್ಣು, ಮೂಗು ಹಾಗೂ ಬಾಯಿಯ ಬಳಿ ಹೋಗೋದನ್ನು ತಡೆಯುವಂತೆ ಎಚ್ಚರಿಸುತ್ತದೆ. ಹೀಗಾಗಿ ಇದು ಕೊರೊನಾ ಸೊಂಕು ಕೈಗಳ ಮೂಲಕ ಹರಡುವ ಸಾಧ್ಯತೆಯನ್ನು ತಪ್ಪಿಸಲು ಈ ರಿಮೈಂಡರ್ ಡಿವೈಸ್ ಅನುಕೂಲವಾಗುತ್ತದೆ ಎನ್ನುತ್ತಾರೆ ಡಿವೈಸ್ ಆವಿಷ್ಕರಿಸಿರುವ ಯುವಕ ಅಕ್ಬರ್.
ಹೊರಗಡೆ ಬಂದಾಗ ನಾವು ವಸ್ತುಗಳನ್ನು ಮುಟ್ಟಿರುತ್ತೇವೆ. ಮುಟ್ಟಿದ ಸ್ಥಳದಲ್ಲಿ ಸೋಂಕು ಇರುವ ಸಾಧ್ಯತೆ ಇರುತ್ತದೆ. ಯಾರಾದರೂ ಕೈ ಕುಲುಕಿರುತ್ತಾರೆ. ಹೀಗಿರುವಾಗ ಕೈ ಸ್ವಚ್ಛವಾಗಿ ತೊಳೆದುಕೊಳ್ಳದೆ, ಹಾಗೆ ನಮ್ಮ ಕಣ್ಣು, ಮೂಗು, ಬಾಯಿಯನ್ನು ಕೈಗಳಿಂದ ಮುಟ್ಟಿಕೊಂಡಾಗ ಕೊರೊನಾ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಅಚಾನಕ್ ಆಗಿ ಕೈಗಳು ಈ ಇಂದ್ರೀಯಗಳ ಕಡೆ ಹೋಗುವುದನ್ನು ತಡೆಯಲು ಈ ಡಿವೈಸ್ ಅಲರ್ಟ್ ಮಾಡುತ್ತದೆ. ನಿಜಕ್ಕೂ ಇದು ತುಂಬಾ ಉಪಯುಕ್ತವಾಗಿದೆ ಎನ್ನುತ್ತಾರೆ ಸ್ಥಳೀಯ ಯುವಕ ಮೆಹಬೂಬ್.