ಕುಷ್ಟಗಿ (ಕೊಪ್ಪಳ) : ಕೋವಿಡ್ -19 ವೈರಸ್ ದಿನದಿಂದ ದಿನಕ್ಕೆ ಸಮುದಾಯಿಕವಾಗಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರು ಸ್ವಯಂ ಮುನ್ನೆಚ್ಚರಿಕೆ ಅಗತ್ಯವಾಗಿದೆ ಎಂದು ತಹಶೀಲ್ದಾರ ಎಂ.ಸಿದ್ದೇಶ ಕರೆ ನೀಡಿದರು.
ಶುಕ್ರವಾರ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಕುಷ್ಟಗಿ ತಾಲೂಕು ಘಟಕದ ಸಹಯೋಗದಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಮಾಸ್ಕ್, ಡೆಟಾಲ್ ಸೋಪು ಹಾಗೂ ಸ್ಯಾನೀಟೇಸ್ ವಿತರಿಸಿ ಮಾತನಾಡಿದರು.
ಬೀದಿ ಬದಿ ವ್ಯಾಪಾರಸ್ಥರಲ್ಲಿಗೆ ಹಲವು ಜನರು ಬರುತ್ತಿದ್ದು, ವ್ಯವಹರಿಸುವ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸಿ ವ್ಯವಹರಿಸುವುದು, ಸ್ಯಾನೀಟೈಸರ್ ಬಳಸುವುದು ಇತ್ಯಾದಿ ಮುನ್ನೆಚ್ಚರಿಕೆ ಕ್ರಮಗಳಿಗೆ ಸ್ವಯಂ ನಿಯಂತ್ರಿಸಿಕೊಳ್ಳಲು ಸಾಧ್ಯವಿದೆ.
ಕೊರೊನಾ ವಿರುದ್ದ ಹೋರಾಟದಲ್ಲಿ ತಾವುಗಳು ಸಹಕರಿಸಬೇಕು ಎಂದರು. ಸಿಪಿಐ ಚಂದ್ರಶೇಖರ ಜಿ. ಮಾತನಾಡಿ, ಜಾಗತಿಕವಾಗಿ ಕೊರೊನಾ ವ್ಯಾಪಿಸಿದ್ದು, ಇದರ ನಿಯಂತ್ರಣ ನಮ್ಮ ಕೈಯಲ್ಲಿದೆ. ನಾವು ಮುನೆಚ್ಚರಿಕೆವಹಿಸಬೇಕು, ರೋಗ ಲಕ್ಷಣ ಕಂಡರೆ ವೈದ್ಯರ ಸಲಹೆ ಪಡೆಯಬೇಕಿದೆ. ಕೊರೊನಾ ವೈರಸ್ ನಿಯಂತ್ರಣದ ಹಿನ್ನೆಲೆಯಲ್ಲಿ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಈ ಕಾರ್ಯಕ್ರಮ ಸ್ತುತ್ಯಾರ್ಹವಾಗಿದೆ ಎಂದು ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರಾಘವೇಂದ್ರ ಭಜಂತ್ರಿ, ಲಲಿತಮ್ಮ ಹಿರೇಮಠ, ಗಂಗಮ್ಮ ಭಜಂತ್ರಿ, ಪಾಷಾಸಾಬ್ ಮಾಗಡಿ, ಪ್ರಭು ಹಿರೇಮಠ, ಅಮರೇಶ ಅರಳಲಿಮಠ, ಅಲ್ಲಾಭಕ್ಷಿ ಹಾವಾಡಿಗ, ದೇವರಾಜ್ ಹಡಪದ, ತೊಂಡೆಪ್ಪ ಚೂರಿ, ಶರಣಪ್ಪ ಭಜಂತ್ರಿ, ಸದ್ದಾಮ್ ಬಂಗಾಳಿ ಮತ್ತಿತರಿದ್ದರು.