ಕೊಪ್ಪಳ: ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಹೀಗಾಗಿ ರಾಜ್ಯದಲ್ಲಿಯೂ ಕ್ಯಾಸಿನೋ ತೆರೆಯುವಂತಹ ಹೊಸ ಯೋಜನೆಗಳನ್ನು ಹುಡುಕ್ತಿದ್ದಾರೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ.
ಸಿ.ಟಿ.ರವಿ ಏನೇನೋ ಮಾತಾಡ್ತಾರೆ. ದುಡ್ಡು ಕೂಡಿಸುವುದಕ್ಕೆ ಇಂತಹ ಯೋಜನೆಗಳನ್ನು ಹುಡುಕುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಬಿಜೆಪಿ ಪಕ್ಷದಲ್ಲಿ ಈ ಹಿಂದೆ ಶಿಸ್ತು ಇತ್ತು. ವಾಜಪೇಯಿ-ಅಡ್ವಾಣಿ ಕಾಲದಲ್ಲಿ ಇದ್ದಾಗ ಬಿಜೆಪಿಗೆ ಸಿದ್ಧಾಂತವಿತ್ತು. ಈಗ ಆ ಸಿದ್ಧಾಂತ ಇಲ್ಲ. ದುಡ್ಡು ಕೂಡಿಸಲು ಜೂಜು ಆಡಿಸುತ್ತಾರೆ, ಇನ್ನೊಂದು ಮಾಡಿಸುತ್ತಾರೆ ಎಂದು ಸತೀಶ್ ಜಾರಕಿಹೊಳಿ ಟೀಕಿಸಿದರು. ಇನ್ನು ಬೆಂಗಳೂರಿನಲ್ಲಿ ಯುವತಿ ದೇಶದ್ರೋಹದ ಘೋಷಣೆ ಕೂಗಿದ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು, ಇಂಥವರನ್ನು ಕರೆತರುವ ಮೊದಲು ಆಯೋಜಕರು ಯೋಚಿಸಬೇಕು. ಇಂಥವರಿಂದ ತೊಂದರೆಯಾಗುತ್ತದೆ, ಅವರಿಗೆ ಪ್ರಬುದ್ಧತೆ ಇರುವುದಿಲ್ಲ ಎಂದರು.
ಇನ್ನು ಸಚಿವ ರಮೇಶ್ ಜಾರಕಿಹೊಳಿ ಏನೇನೋ ಹೇಳಿಕೆ ಕೊಡುತ್ತಾರೆ. ರಮೇಶ್ ಜಾರಕಿಹೊಳಿ ಬ್ಲಾಕ್ಮೇಲ್ ಮಾಡುವುದನ್ನು ಬಿಡಬೇಕು. ಮಹೇಶ್ ಕುಮಟಳ್ಳಿ ವಿಷಯಕ್ಕೆ ಸಂಬಂಧಿಸಿದಂತೆ ರಾಜೀನಾಮೆ ಕೊಡ್ತೀನಿ ಎಂದು ರಮೇಶ್ ಜಾರಕಿಹೊಳಿ ಹೇಳುತ್ತಿರುವುದಕ್ಕೆ ಯಡಿಯೂರಪ್ಪ, ಅಮಿತ್ ಶಾ ಉತ್ತರ ಕೊಡಬೇಕು.
ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಖಾತೆ ನಿಭಾಯಿಸುವುದು ಕಷ್ಟ. ಈ ಖಾತೆಯನ್ನು ಕೊಡಬಾರದೆಂದು ಬಿಜೆಪಿಯವರು ಒತ್ತಡ ಹಾಕಿದ್ದರು. ನಾಲ್ಕೂ ದಿಕ್ಕಿನಿಂದಲೂ ಜಲ ಸಮಸ್ಯೆ ಇದೆ. ರಮೇಶ್ ಜಾರಕಿಹೊಳಿಗೆ ಎಷ್ಟು ಕೆಪಾಸಿಟಿ ಇದೆ ಎನ್ನುವುದು ಅಧಿವೇಶನದಲ್ಲಿ ಗೊತ್ತಾಗುತ್ತದೆ. ಹೊರಗಡೆ ಮಾತ್ರ ಡಿಕೆಶಿ ಮತ್ತು ರಮೇಶ್ ನಡುವೆ ಕುಸ್ತಿ ಇರೋದು ನಿಜ. ಒಳ್ಳೆಯ ಖಾತೆ ಸಿಕ್ಕಿದೆ. ಅದನ್ನು ಚೆನ್ನಾಗಿ ನಿಭಾಯಿಸಬೇಕು. ಅಲ್ಲದೆ ಅವರು ಹೋಗಿರುವ ಪಕ್ಷದ ತತ್ವ ಸಿದ್ಧಾಂತ ಒಪ್ಪಿಕೊಳ್ಳಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದರು.