ಕೊಪ್ಪಳ: ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿಯವರು ವಚನಭ್ರಷ್ಟರಾಗಬಾರದು ಅಂದ್ರೆ ಕಾಂಗ್ರೆಸ್ ಪಕ್ಷ ತೊರೆದ 17 ಜನರನ್ನು ಮಂತ್ರಿ ಮಾಡಬೇಕು. ಅವರನ್ನು ಮಂತ್ರಿ ಮಾಡದಿದ್ದರೆ ಬಿಜೆಪಿಯವರು ವಚನಭ್ರಷ್ಡರಾಗ್ತಾರೆ ಎಂದು ಮಾಜಿ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಹೇಳಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬರಲು ಕಾಂಗ್ರೆಸ್ ಪಕ್ಷ ತೊರೆದ 17 ಜನರು ಕಾರಣ ಎಂದು ಈಗಾಗಲೇ ಬಿಜೆಪಿಯವರು ಹಾಗೂ ಯಡಿಯೂರಪ್ಪ ಸಾಕಷ್ಟು ಬಾರಿ ಹೇಳಿದ್ದಾರೆ. ಆ 17 ಜನರು ಮಂತ್ರಿಯಾಗುವ ಅಸೆಯಿಂದಲೇ ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋಗಿದ್ದಾರೆ. ಆದರೆ ಇನ್ನೂ ಅವರು ಮಂತ್ರಿಗಳಾಗಿಲ್ಲ. ಮಂತ್ರಿಯಾಗಬೇಕು ಎಂದು ಹೋದವರು ಇಂದು ಬಿಜೆಪಿಯವರ ಮನೆ ಕಾಯುವಂತಹ ಪರಿಸ್ಥಿತಿ ಬಂದಿದೆ. ಅವರಿಗೆ ಈಗ ಪಶ್ಚಾತಾಪವಾಗುತ್ತಿರಬಹುದು. ಒಂದು ವೇಳೆ 17 ಜನರನ್ನು ಬಿಟ್ಟು ಸಂಪುಟ ವಿಸ್ತರಣೆ ಮಾಡಿದರೆ ಬಿಜೆಪಿ ಸರ್ಕಾರ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದರು.
ಇನ್ನು ಬಿಜೆಪಿ ಕಾರ್ಯಕರ್ತರಿಂದ ನಾನು ಕನಕಗಿರಿ ಶಾಸಕನಾಗಿದ್ದಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದೆ. ಆಗ ನನ್ನಿಂದಲೇ ಬಿಜೆಪಿಗೆ ಒಳ್ಳೆಯದಾಗಿದೆ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಹಿಡಿಯಲು ಅಂದು ಪಕ್ಷೇತರವಾಗಿ ಗೆದ್ದಿದ್ದ ನಾವು ಐದು ಜನರು ಕಾರಣ ಎಂದು ತಂಗಡಗಿ ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸತ್ತ ಸ್ಥಿತಿಯಲ್ಲಿದೆ. ಯಾವ ಯೋಜನೆಗಳು ಜಾರಿಯಾಗುತ್ತಿಲ್ಲ. ಸರಿಯಾದ ಕಾನೂನುಗಳು ಪಾಲನೆಯಾಗುತ್ತಿಲ್ಲ. ಕೊಪ್ಪಳ ಜಿಲ್ಲೆಯಲ್ಲಿ ಅಂದರ್ ಬಹಾರ್ ಜೂಜಾಟ, ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ನಡೆದಿದೆ. ಇದಕ್ಕೆ ಪೊಲೀಸರೇ ಸಾಥ್ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ವಾಲ್ಮೀಕಿ, ಭೋವಿಗಳು ಈ ದೇಶ ವಾಸಿಗಳಲ್ಲ ಎಂಬ ರೀತಿಯಲ್ಲಿ ಬಿಜೆಪಿಯ ಬಿ.ಎಲ್. ಸಂತೋಷ್ ಭಾಷಣವೊಂದರಲ್ಲಿ ಮಾತನಾಡಿದ್ದಾರೆ. ಈ ಬಗ್ಗೆ ಬಿಜೆಪಿಯಲ್ಲಿರುವ ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿಯವರು ಈ ದೇಶದ ಮೂಲವಾಸಿಗಳು ಯಾರೂ ಎಂದು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.
ಇನ್ನು ಕೆಪಿಸಿಸಿ ಅಧ್ಯಕ್ಷರು ಯಾರಾಗ್ಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ನಮ್ಮಲ್ಲಿ ಮೂಲ ಕಾಂಗ್ರೆಸ್ಸಿಗರು, ವಲಸೆ ಕಾಂಗ್ರೆಸ್ಸಿಗರು ಎಂಬುದೇನೂ ಇಲ್ಲ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದರು.