ಕುಷ್ಟಗಿ (ಕೊಪ್ಪಳ): ರಾಜ್ಯದ 5 ಕಡೆ ಕುರಿ ತಳಿ ಸಂವರ್ಧನಾ ಕೇಂದ್ರಗಳಿದ್ದು, ಪ್ರಸಕ್ತ ಬಜೆಟ್ನಲ್ಲಿ ಅವುಗಳಿಗೆ ವಿಶೇಷ ಅನುದಾನ ಮೀಸಲಿರಿಸಲು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದೆ ಎಂದು ಕುರಿ ಮತ್ತು ಉಣ್ಣೆ ನಿಗಮ ಮಂಡಳಿ ಅಧ್ಯಕ್ಷ ಶರಣು ತಳ್ಳೀಕೇರಿ ಹೇಳಿದರು.
ಕುಷ್ಟಗಿ ಹಳೆ ಪ್ರವಾಸಿ ಮಂದಿರದಲ್ಲಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ವಿವಿಧ ಕ್ಷೇತ್ರದ ಇಂಜಿನಿಯರ್ಗಳು, ವೈದ್ಯರು, ಎಂಬಿಎ ಪದವೀಧರರು ಕುರಿ ಸಾಕಾಣಿಕೆಗೆ ಆಸಕ್ತಿ ತೋರಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ನಮ್ಮ ಉತ್ತರ ಕರ್ನಾಟಕದಲ್ಲಿ ಕುರಿ ಸಾಕಿದವ ಕುಬೇರ, ಅರಸ ಎಂಬ ಮಾತಿದೆ. ಬೆಳೆ ನಷ್ಟದಿಂದ ರೈತ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಯಿದೆ. ಆದರೆ, ಕುರಿ ಸಾಕಾಣಿಕೆದಾರರು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ಇಲ್ಲ ಎಂದು ತಿಳಿಸಿದರು.
ರಾಜ್ಯದ 5 ಕಡೆ ಕುರಿ ತಳಿ ಸಂವರ್ಧನ ಕೇಂದ್ರಗಳಿದ್ದು, ಪ್ರಸಕ್ತ ಬಜೆಟ್ನಲ್ಲಿ ಅವುಗಳಿಗೆ ವಿಶೇಷ ಅನುದಾನ ಮೀಸಲಿರಿಸಲು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದೆ. ಕೊಪ್ಪಳ ಹಾಗೂ ಇತರೆ ಜಿಲ್ಲೆಗಳಲ್ಲಿ ಡೆಕ್ಕನಿ ಕುರಿಗಳನ್ನು ಸಾಕಾಣಿಕೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅನುದಾನ ಬಿಡುಗಡೆ ಬಗ್ಗೆ ಸಿಎಂ ಬಳಿ ಚರ್ಚಿಸಲಾಗಿದ್ದು, ಸಿಎಂ ಅವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಅಲ್ಲದೇ, ಅನುಗ್ರಹ ಯೋಜನೆಯಲ್ಲಿ ಬಾಕಿ ಪರಿಹಾರ ಬಿಡುಗಡೆಗೆ ಸಿಎಂ ಬಳಿ ಪ್ರಸ್ತಾಪಿಸಲಾಗಿದೆ ಎಂದರು.
ಓದಿ: ಮೈಸೂರಲ್ಲಿ ಭಿಕ್ಷುಕಿ ಮೇಲೆ ಗ್ಯಾಂಗ್ ರೇಪ್, ಕೊಲೆ: ಐವರು ಅರೆಸ್ಟ್
ಗೋಹತ್ಯೆ ನಿಷೇಧದ ಬಳಿಕ ಕುರಿ ಮಾಂಸದ ಬೇಡಿಕೆ ಹೆಚ್ಚಿದ್ದು, ಇದಕ್ಕೆ ಪೂರಕವಾಗಿ ಕುರಿ ಸಾಕಾಣಿಕೆಯೂ ಜಾಸ್ತಿಯಾಗಬೇಕಿದೆ. ಕುರಿ ಸಾಕಾಣಿಕೆ ಕುಲಕಸುಬು ಅಲ್ಲ, ಉದ್ದಿಮೆಯಾಗಿ ರೂಪಿಸಲು ಹಲವು ಅಭಿವೃದ್ಧಿ ಕಾರ್ಯಯೋಜನೆಗಳು ಆಗಬೇಕಿದೆ ಎಂದು ಹೇಳಿದರು.