ಕುಷ್ಟಗಿ(ಕೊಪ್ಪಳ): ಶಾಮೀಯಾನ, ಡೆಕೋರೇಟರ್ಸ್, ಧ್ವನಿ ಮತ್ತು ಬೆಳಕು ವಿಭಾಗಗಳಲ್ಲಿ ಕಾರ್ಯನಿರ್ವಹಿಸುವ ವೃತ್ತಿ ನಿರತರಿಗೆ ಆರ್ಥಿಕ ಪ್ಯಾಕೇಜ್ ಘೋಷಿಸಬೇಕೆಂದು ಒತ್ತಾಯಿಸಿ ಕುಷ್ಟಗಿ ತಾಲೂಕಿನ ಶಾಮೀಯಾನ ಸಪ್ಲಾಯರ್ಸ್ ಕ್ಷೇಮಾಭಿವೃದ್ಧಿ ಸಂಘ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಕೊರೊನಾ ವೈರಸ್ ಲಾಕ್‌ಡೌನ್ ಪರಿಸ್ಥಿತಿಯಲ್ಲಿ ಯಾವುದೇ ಕಾರ್ಯಕ್ರಮ, ಸಮಾರಂಭಗಳು ನಡೆಯುತ್ತಿಲ್ಲ. ಹೀಗಾಗಿ ಈ ಉದ್ಯಮ ನಂಬಿದವರ ಆದಾಯದ ಮೂಲಕ್ಕೆ ಸಮಸ್ಯೆ ತಲೆದೋರಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಬ್ಯಾಂಕ್ ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಂದ ಪಡೆದ ಸಾಲ ಹಿಂತಿರುಗಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಶಾಮೀಯಾನ ವಸ್ತುಗಳನ್ನು ಶೇಖರಿಸಿಡುವ ಗೋಡೌನ್ ಬಾಡಿಗೆ ಪಾವತಿಸಲು ಪರದಾಡುವಂತಾಗಿದೆ. ಇಂಥಾ ಪರಿಸ್ಥಿತಿಯಲ್ಲಿ ವೃತ್ತಿ ನಿರ್ವಹಿಸುವ ಮಾಲೀಕರು, ಕೆಲಸಗಾರ ಕುಟುಂಬಗಳ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಸರ್ಕಾರದಿಂದ ಆರ್ಥಿಕ ಪ್ಯಾಕೇಜ್ ವಿತರಿಸಬೇಕೆಂದು ಮುಖ್ಯಮಂತ್ರಿಗಳಿಗೆ ಕುಷ್ಟಗಿ ತಹಶೀಲ್ದಾರ್ ಮೂಲಕ ಸಲ್ಲಿಸಿದ ಮನವಿಯನ್ನು ಶಿರಸ್ತೇದಾರ ರಜನೀಕಾಂತ್ ಸ್ವೀಕರಿಸಿದರು. ಈ ವೇಳೆ, ಸಂಘದ ಅಧ್ಯಕ್ಷ ನಬಿಸಾಬ್ ಇಲಕಲ್, ಅಂದಾನಯ್ಯ ಹಿರೇಮಠ, ಶ್ಯಾಮಣ್ಣ ಕಟ್ಟಿಮನಿ ಮತ್ತಿತರಿದ್ದರು.