ಕುಷ್ಟಗಿ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಕೆಲಸವಿಲ್ಲದೆ ಅನಗತ್ಯವಾಗಿ ಜನರ ಮಧ್ಯೆ ತಿರುಗಾಡುವುದನ್ನು ಸ್ವಯಂ ನಿಯಂತ್ರಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.
ಸೆ. 12ರಂದು ಕೋವಿಡ್ ಸೋಂಕು ದೃಢಪಟ್ಟು ಬೆಂಗಳೂರು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿ ಗುಣಮುಖರಾಗಿ ಈಚೆಗೆ ಕುಷ್ಟಗಿಗೆ ಆಗಮಿಸಿದ ಅವರು, ಈಟಿವಿ ಭಾರತ ಪ್ರತಿನಿಧಿಯೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡರು. ತಾವು ಸಾರ್ವಜನಿಕರ ಮಧ್ಯೆ ಇರುವವರು, ಜನರ ಮಧ್ಯೆ ಮುಂಜಾಗ್ರತೆ ವಹಿಸಿಕೊಂಡರೂ ಕೊರೊನಾ ಸೋಂಕು ಹರಡುತ್ತಿದೆ. ಇಂತಹ ಭಯಾನಕ ಕಾಯಿಲೆಯನ್ನು ಮಾಸ್ಕ್ ಧರಿಸುವುದರಿಂದ ನಿಯಂತ್ರಿಸಬಹುದಾಗಿದೆ. 60ರ ವಯೋಮಾನದವರಿಗೆ ಅತೀ ಶೀಘ್ರವಾಗಿ ಹರಡುವ ರೋಗವಾಗಿದೆ. ಲಂಗ್ಸ್ಗೆ ವ್ಯಾಪಿಸಿದರೆ ಬದುಕುಳಿಯುವುದು 50:50 ಆಗಿರುವುದರಿಂದ ಜೀವ ಉಳಿಯಲು ವೈದ್ಯರು, ರೋಗಿಯೂ ಹೋರಾಟ ನಡೆಸಬೇಕಾಗುತ್ತದೆ.
ಹೀಗಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಬೇಕು. ಕೊರೊನಾ ಲಕ್ಷಣಗಳು ಕಂಡು ಬಂದಲ್ಲಿ ವೈದ್ಯರಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆದು ಸರ್ಕಾರಕ್ಕೆ ಸಹಕರಿಸಬೇಕಿದೆ. ಸರ್ಕಾರಕ್ಕೆ ಸಹಕರಿಸದಿದ್ದರೆ ಸರ್ಕಾರದ ಪ್ರಯತ್ನ ವ್ಯರ್ಥವಾಗುತ್ತದೆ. ಸ್ವಯಂ ಪ್ರೇರಿತವಾಗಿ ಕೋವಿಡ್ ಟೆ್ಸ್ಟ್ಗೆ ಒಳಪಡಬೇಕು ಎಂದರು.