ಕೊಪ್ಪಳ: ಸರ್ಕಾರಿ ನೌಕರಿ ಕೊಡಿಸುವುದಾಗಿ ಮೋಸ ಮಾಡಿದ್ದ ಗಂಗಾ ಕುಲಕರ್ಣಿ ವಿರುದ್ಧ ಕೇಸ್ ದಾಖಲಿಸಿದ್ದೆ. ಇಂದು ಗಂಗಾ ಕುಲಕರ್ಣಿ ಆತ್ಮಹತ್ಯೆ ಮಾಡಿಕೊಂಡ ವಿಷಯ ಗೊತ್ತಾಯಿತು. ಆದರೆ ನ್ಯಾಯಾಲಯದಿಂದ ನನಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಗಂಗಾ ಕುಲಕರ್ಣಿ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದ ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪಾ ಗ್ರಾಮದ ಸಂತೋಷ್ ಪ್ರತಿಕ್ರಿಯಿಸಿದ್ದಾರೆ.
ಕುಷ್ಟಗಿಯಲ್ಲಿ ಮಾತನಾಡಿದ ಅವರು, ನಾನು ಕೆಲಸದ ನಿಮಿತ್ತ ಇಂದು ಕುಷ್ಟಗಿಗೆ ಬಂದಿದ್ದೆ. ಆಗ ಗಂಗಾ ಕುಲಕರ್ಣಿ ಆತ್ಮಹತ್ಯೆ ಮಾಡಿಕೊಂಡ ವಿಷಯ ಗೊತ್ತಾಯಿತು. ಕಳೆದ 2017 ರಲ್ಲಿ ಗಂಗಾ ಕುಲಕರ್ಣಿ ಬಸ್ ನಲ್ಲಿ ಪರಿಚಯವಾಗಿದ್ದರು. ಜ್ಯೋತಿ ಕುಲಕರ್ಣಿ ಎಂದು ಪರಿಚಯಿಸಿಕೊಂಡು ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿದರು. ಅವರನ್ನು ನಂಬಿ ನಾನು 3 ಲಕ್ಷ ರೂಪಾಯಿ ನೀಡಿದ್ದೆ. ನನ್ನಂತೆ ಅನೇಕರಿಗೆ ಅವರು ವಂಚಿಸಿದ್ದಾರೆ ಎಂದರು.
ಅವರ ವಿರುದ್ಧ ಕುಷ್ಟಗಿ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಅವರನ್ನು ಸಾಕಷ್ಟು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಕೆ. ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಪ್ರಕರಣದಲ್ಲಿ ಈ ಮಹಿಳೆಯ ಹೆಸರು ಕೇಳಿ ಬಂದಾಗ ಸಿಗುತ್ತಾಳೆ ಎಂದುಕೊಂಡಿದ್ದೆವು. ಗಂಗಾ ಅವರಿಂದ ನನಗೆ ಮೋಸವಾಗಿದೆ. ಪ್ರಕರಣ ನ್ಯಾಯಾಲಯದಲ್ಲಿದೆ. ನನಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ ಎಂದು ಸಂತೋಷ್ ಹೇಳಿದ್ದಾರೆ.