ಕೊಪ್ಪಳ: ಜಿಲ್ಲೆಯಲ್ಲಿ ಲಾಕ್ಡೌನ್ ನಿಯಮಗಳು ಒಂದಿಷ್ಟು ಸಡಿಲಗೊಂಡಿವೆ. ಈ ನಡುವೆ ಮಾವಿನ ಸೀಸನ್ ಆರಂಭವಾಗಿದ್ದು, ಮಾವು ಪ್ರಿಯರ ಬಾಯಲ್ಲಿ ನೀರೂರಿಸುತ್ತಿದೆ. ಈಗಾಗಲೇ ಕೊಪ್ಪಳದ ಕೆಲವೇ ಕೆಲವು ಕಡೆ ಮಾವಿನ ಹಣ್ಣು ಬಂದಿದೆ. ಮಾವಿನ ಹಣ್ಣಿನ ಸೀಸನ್ ಮೇ ಮೊದಲ ವಾರದಿಂದ ಜೋರಾಗಲಿದ್ದು, ನೈಸರ್ಗಿಕವಾಗಿ ಹಣ್ಣಾಗಿಸುತ್ತಿದ್ದಾರೆ.
ನಗರದ ತೋಟಗಾರಿಕಾ ಇಲಾಖೆ ಕಚೇರಿ ಆವರಣದಲ್ಲಿರುವ ಹಣ್ಣಿನಂಗಡಿಯಲ್ಲಿ ಎರಡು ನಮೂನೆಯ ಮಾವಿನ ಹಣ್ಣುಗಳು ಬಂದಿವೆ. ಪ್ರತಿ ಕೆಜಿ ಹಣ್ಣಿಗೆ ನೂರರಿಂದ ನೂರಿಪ್ಪತ್ತು ರೂಪಾಯಿ ದರವಿದೆ. ಈ ಬಾರಿ ಮಾವಿನ ಹಣ್ಣಿನ ದರ ಹೆಚ್ಚಾಗಿದೆ. ಆದರೂ ಪರವಾಗಿಲ್ಲ ಎಂದುಕೊಂಡು ಜನರು, ಮಾವಿನ ಹಣ್ಣನ್ನು ಕೊಂಡುಕೊಳ್ಳುವುದಕ್ಕೆ ಬರ್ತಿದ್ದಾರೆ. ಹೀಗಾಗಿ ತೋಟಗಾರಿಕಾ ಇಲಾಖೆ ಆವರಣದಲ್ಲಿ ಈಗ ಮಾವಿನ ಹಣ್ಣಿನ ವಾಸನೆ ಪಸರಿಸಿದೆ.
ಪ್ರತಿ ವರ್ಷ ತೋಟಗಾರಿಕೆ ಇಲಾಖೆ ಮಾವಿನ ಹಣ್ಣಿನ ಮೇಳ ಆಯೋಜನೆ ಮಾಡುತ್ತಿತ್ತು. ಈ ಬಾರಿ ಕೊರೊನಾ ಭೀತಿ ಹಿನ್ನೆಲೆ ಲಾಕ್ಡೌನ್ ಇರುವುದರಿಂದ ಮಾವು ಮೇಳ ಆಯೋಜನೆಯಾಗ್ತಿಲ್ಲ. ಆದರೆ ಮಾವು ಪ್ರಿಯರಿಗೆ ಮಾವಿನ ಹಣ್ಣನ್ನು ಮನೆಗೆ ತಲುಪಿಸುವ ಚಿಂತನೆಯನ್ನು ಕೊಪ್ಪಳದ ತೋಟಗಾರಿಕೆ ಇಲಾಖೆ ನಡೆಸ್ತಿದೆ.