ಕೊಪ್ಪಳ: ಸುಗ್ರೀವಾಜ್ಞೆಗಳ ಮೂಲಕ ಸರ್ಕಾರ ಜಾರಿ ಮಾಡಿರುವ ಕಾನೂನುಗಳನ್ನು ಈ ಅಧಿವೇಶನದಲ್ಲಿ ಕೈಬಿಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದ್ದಾರೆ.
ನಗರದಲ್ಲಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ, ವಿದ್ಯುತ್ ಕಾಯ್ದೆ, ಕಾರ್ಮಿಕ ಕಾಯ್ದೆಗಳನ್ನು ಸರ್ಕಾರ ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತಂದಿರುವ ಉದ್ದೇಶವಾದರೂ ಏನು? ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಖಾಸಗಿ ವ್ಯಕ್ತಿಗಳ, ಕಾರ್ಪೋರೇಟ್ ಕಂಪನಿಗಳ ಹಿತದೃಷ್ಟಿಯನ್ನು ಇಟ್ಟುಕೊಂಡು ಇಂತಹ ರೈತ ವಿರೋಧಿ, ಜನವಿರೋಧಿ ಕಾಯ್ದೆಗಳನ್ನು ಜಾರಿ ಮಾಡುತ್ತಿವೆ ಎಂದರು.
ರೈತರಿಗೆ ಬೇಕಾದ ಕಾನೂನುಗಳನ್ನು ಮಾಡದೆ ರೈತ ವಿರೋಧಿ ಕಾನೂನನ್ನು ಮಾಡುತ್ತಿರುವ ಸಿಎಂ ಬಿ.ಎಸ್.ಯಡಿಯೂರಪ್ಪ, ಅಂದು ಹೆಗಲ ಮೇಲೆ ಹಸಿರು ಶಾಲು ಹೊದ್ದು ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ಇದಕ್ಕೇನಾ? ರೈತರನ್ನು ಒಕ್ಕಲೆಬ್ಬಿಸುವ ಕಾನೂನು ಜಾರಿ ಮಾಡುವ ಕೆಲಸ ಮಾಡುವುದಕ್ಕಾ? ಎಂದು ಪ್ರಶ್ನಿಸಿದರು.
ಅಲ್ಲದೆ ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತರಲಾಗಿರುವ ಈ ಎಲ್ಲಾ ಕಾಯ್ದೆಗಳನ್ನು ಈ ಸದನದಲ್ಲಿ ಕೈಬಿಡಬೇಕು. ಸರ್ಕಾರವನ್ನು ಎಚ್ಚರಿಸುವ ನಿಟ್ಟಿನಲ್ಲಿ ಇದೇ 21ರಂದು ಬೆಂಗಳೂರಿನಲ್ಲಿ ವಿಧಾನಸೌಧ ಮುತ್ತಿಗೆ ಹಾಕಲಾಗುತ್ತದೆ ಎಂದರು.