ಕೊಪ್ಪಳ: ಫೋಟೋಗ್ರಫಿ ಅನ್ನೋದು ಒಂದು ಕಲೆ. ಒಂದು ಫೋಟೋ ಸಾವಿರ ಶಬ್ದಗಳಿಗೆ ಸಮ. ಹೀಗಾಗಿಯೇ, ಅಪರೂಪದ ಹಾಗೂ ಸೃಜನಾತ್ಮಕ ಫೋಟೋಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದುಬಿಡುತ್ತವೆ. ಇಂತಹುದೇ ಸೃಜನಾತ್ಮಕ ಫೋಟೋಗಳು ನಗರದಲ್ಲಿ ವೀಕ್ಷಕರ ಮನಸೂರೆಗೊಳಿಸುತ್ತಿವೆ.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದಿನಿಂದ ನಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಕ್ರೀಡಾಕೂಟದ ಹಿನ್ನೆಲೆ ಹವ್ಯಾಸಿ ಛಾಯಾಗ್ರಾಹಕ ಪಿ.ಎಸ್. ಅಮರದೀಪ್ ಅವರು ತಾವು ಸೆರೆಹಿಡಿದ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಿದ್ದಾರೆ. ಇದೀಗ ಇವು ಸಾಕಷ್ಟು ಜನರ ಕಣ್ಮನ ಸೆಳೆಯುತ್ತಿದೆ.
ಜಿಲ್ಲಾ ಗ್ರಾಹಕರ ವೇದಿಕೆಯ (ನ್ಯಾಯಾಲಯ)ಲ್ಲಿ ರಿಜಿಸ್ಟ್ರಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಎಸ್. ಅಮರದೀಪ ಅವರು ಸೆರೆ ಹಿಡಿದಿರುವ ಛಾಯಾಚಿತ್ರಗಳು ನೋಡುಗರ ಚಿತ್ತವನ್ನು ಆಕರ್ಷಿಸುತ್ತಿವೆ. ಸುಮಾರು 60 ಆಯ್ದ ಛಾಯಾಚಿತ್ರಗಳನ್ನು ಅವರು ಪ್ರದರ್ಶನಕ್ಕೆ ಇಟ್ಟಿದ್ದು, ಸೆರೆ ಹಿಡಿದಿರುವ ಒಂದೊಂದು ಚಿತ್ರವೂ ಒಂದೊಂದು ಕಥೆಯನ್ನು ಹೇಳುತ್ತಿವೆ.
2014 ರಿಂದಲೂ ಛಾಯಾಚಿತ್ರ ತೆಗೆಯುವ ಹವ್ಯಾಸ ರೂಢಿಸಿಕೊಂಡಿರುವ ಪಿ.ಎಸ್. ಅಮರದೀಪ್ ಅವರು ಈವರೆಗೆ ಸಾವಿರಾರು ಅದ್ಭುತವಾದ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ಸರ್ಕಾರಿ ನೌಕರರಾಗಿರುವುದರಿಂದ ರಜಾ ದಿನಗಳಲ್ಲಿ ಕ್ಯಾಮೆರಾ ಹೆಗಲಿಗೆ ನೇತುಹಾಕಿಕೊಂಡು ಹೊರಟರು ಎಂದರೆ, ಒಂದೊಳ್ಳೆ ಚಿತ್ರ ಸಿಗದೇ ಹಿಂತಿರುವುದಿಲ್ಲ.
ಓದಿ: ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ ಮೀರಾ ರಾಘವೇಂದ್ರ
ಫೋಟೋಗ್ರಫಿಯನ್ನು ಹವ್ಯಾಸವಾಗಿಸಿಕೊಂಡ ಮೇಲೆ ಅನೇಕ ಚಿತ್ರಗಳನ್ನು ಸೆರೆಹಿಡಿದಿರುವೆ. ಈಗ ಆಯ್ದ ಕೆಲ ಚಿತ್ರಗಳನ್ನು ಮಾತ್ರ ಪ್ರದರ್ಶನ ಮಾಡುತ್ತಿದ್ದೇನೆ ಎನ್ನುತ್ತಾರೆ ಹವ್ಯಾಸಿ ಛಾಯಾಗ್ರಾಹಕ, ಜಿಲ್ಲಾ ಗ್ರಾಹಕ ನ್ಯಾಯಾಲಯದ ರಿಜಿಸ್ಟ್ರಾರ್ ಪಿ.ಎಸ್. ಅಮರದೀಪ್.
ಕ್ರೀಡಾಕೂಟಕ್ಕೆ ಬಂದಿರುವ ಎಲ್ಲ ಸರ್ಕಾರಿ ನೌಕರರು ಅಮರದೀಪ ಅವರ ಈ ಛಾಯಾಚಿತ್ರಗಳನ್ನು ಕಣ್ತುಂಬಿಕೊಂಡು ವಾವ್! ಎಂದು ಉದ್ಘಾರ ತೆಗೆಯುತ್ತಿದ್ದಾರೆ. ಒಂದಕ್ಕಿಂತಲೂ ಒಂದು ಭಿನ್ನವಾಗಿದ್ದು ಮನಸೂರೆಗೊಳ್ಳುವಂತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಹವ್ಯಾಸಿ ಛಾಯಾಗ್ರಾಹಕರಾಗಿರುವ ಸರ್ಕಾರಿ ನೌಕರ ಅಮರದೀಪ್ ಅವರು ಸೆರೆ ಹಿಡಿದಿರುವ ಛಾಯಾಚಿತ್ರಗಳು ಹಾಗೂ ಅವುಗಳಿಗೆ ನೀಡಿರುವ ಕ್ಯಾಚಿ ಟೈಟಲ್ ಗಳು ಫೋಟೋಗ್ರಫಿಯ ಹುಚ್ಚು ಹಿಡಿಸುತ್ತಿವೆ.