ಕೊಪ್ಪಳ: ಕಲ್ಯಾಣ ಕರ್ನಾಟಕ ಭಾಗದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವೇತನಾನುದಾನ ಹಾಗೂ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ತಾಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಹಾಗೂ ಶಿಕ್ಷಕರು, ಉಸ್ತುವಾರಿ ಸಚಿವ, ಶಾಸಕ ಹಾಗೂ ಸಂಸದರ ಕಚೇರಿ ಮುಂದೆ ಶಾಲಾ ಘಂಟೆ ಬಾರಿಸುವ ಮೂಲಕ ಮನವಿ ಸಲ್ಲಿಸಲಾಯಿತು.
ಓದಿ: 'ಪೊಗರು' ವಿವಾದದ ಬಗ್ಗೆ ಕೊನೆಗೂ ಮೌನ ಮುರಿದ ಧ್ರುವ ಸರ್ಜಾ..!
ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನದ 371 ಜೆ ಕಲಂ ಜಾರಿ ಮಾಡಲಾಗಿದೆ. ಈ ಕಲಂ ಅನ್ವಯ ಕಲ್ಯಾಣ ಕರ್ನಾಟಕ ಭಾಗದ ಅನುದಾನ ರಹಿತ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳಿಗೆ 1995ರಿಂದ 2015ರವರೆಗೆ ವೇತನಾನುದಾನವನ್ನು ನೀಡಬೇಕು.
ಅಲ್ಲದೆ ಖಾಸಗಿ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕು ಎಂಬ ಬೇಡಿಕೆಯನ್ನು ಹಲವು ವರ್ಷಗಳಿಂದ ಸರ್ಕಾರ ಹಾಗೂ ಜನಪ್ರತಿನಿಧಿಗಳ ಮುಂದೆ ಇಡಲಾಗಿದೆ. ಅನೇಕ ಬಾರಿ ಮನವಿ ಸಲ್ಲಿಸಲಾಗಿದ್ದು, ಈವರೆಗೂ ನಮ್ಮ ಬೇಡಿಕೆ ಈಡೇರಿಲ್ಲ.
ಕಲ್ಯಾಣ ಕರ್ನಾಟಕ ಭಾಗಕ್ಕೆ ಬಿಡುಗಡೆಯಾಗುವ ಅನುದಾನವನ್ನು ಸಂಪೂರ್ಣವಾಗಿ ಹಾಗೂ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಹೀಗಾಗಿ ಈ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಎಚ್ಚರಿಸುವ ನಿಟ್ಟಿನಲ್ಲಿ ಶಾಸಕರು, ಸಂಸದರು ಹಾಗೂ ಉಸ್ತುವಾರಿ ಸಚಿವರ ಕಚೇರಿ ಮುಂದೆ ಶಾಲಾ ಘಂಟೆ ಬಾರಿಸಿ ಮನವಿ ಸಲ್ಲಿಸುತ್ತಿದ್ದೇವೆ ಎಂದು ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ತಾಲೂಕು ಘಟಕದ ಅಧ್ಯಕ್ಷ ಶಾಹಿದ್ ತಹಸೀಲ್ದಾರ್ ತಿಳಿಸಿದ್ದಾರೆ.