ಗಂಗಾವತಿ: ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟಕರವಾದ ಈ ದಿನಗಳಲ್ಲಿ ಸರ್ಕಾರ ದಿನಕ್ಕೊಂದು ಆದೇಶ ಹೊರಡಿಸುತ್ತಿರುವುದು ಗಮನಿಸಿದರೆ ನಾವು ಸಿಬ್ಬಂದಿಗೆ ವೇತನ ನೀಡಲಾಗದಂತ ಸಂಧಿಗ್ಧ ಸ್ಥಿತಿಯಲ್ಲಿದ್ದೇವೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಅಳಲು ತೋಡಿಕೊಂಡರು.
ಗಂಗಾವತಿ, ಕಾರಟಗಿ ಹಾಗೂ ಕನಕಗಿರಿ ತಾಲ್ಲೂಕು ಒಳಗೊಂಡ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ಕ್ಯಾಮ್ಸ್ ಘಟಕದಿಂದ ತಾಲ್ಲೂಕು ಅಧ್ಯಕ್ಷ ಆರ್. ದೇವಾನಂದ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮೂಲಕ ಸರ್ಕಾರಕ್ಕೆ ಹಲವು ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ದೇವಾನಂದ್, ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಖಾಸಗಿ ಶಾಲೆಗಳನ್ನು ನಡೆಸುವುದು ತೀವ್ರಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಶುಲ್ಕ ವಸೂಲಾತಿ ಸೇರದಂತೆ ಪ್ರತಿಯೊಂದಕ್ಕೂ ಸರ್ಕಾರ ನಮ್ಮ ಮೇಲೆ ಗಧಾ ಪ್ರಹಾರ ಮಾಡುತ್ತಿರುವುದು ನಮ್ಮನ್ನು ಇನ್ನಷ್ಟು ಆರ್ಥಿಕವಾಗಿ ಕುಸಿಯುವಂತೆ ಮಾಡಿದೆ ಎಂದರು.
ಈಗಾಗಲೆ ಕಳೆದ ಆರು ತಿಂಗಳಿಂದ ನಮ್ಮ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರು ಸೇರಿದಂತೆ ಇತರ ಸಿಬ್ಬಂದಿಗಳಿಗೆ ವೇತನ ನೀಡಲಾಗದಂತ ಸ್ಥಿತಿಯಲ್ಲಿದ್ದೇವೆ. ಈ ಹಿನ್ನೆಲೆ ನಮಗೂ ವಠಾರ ಶಾಲೆ ನಡೆಸಲು ಅನುಮತಿ ಸೇರಿದಂತೆ ಇನ್ನಿತರ ಎಲ್ಲಾ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.