ಬೆಂಗಳೂರು/ತುಮಕೂರು/ಕೊಪ್ಪಳ: ಮೈಸೋಕುವ ಸೂರ್ಯನ ಪ್ರಖರ ಕಿರಣಗಳು ದೇಹದಲ್ಲಿ ದಾಹ ಹೆಚ್ಚಿಸುತ್ತವೆ. ಹಾಗಾಗಿ, ಬಿರು ಬೇಸಗೆಯ ತಾಪದಿಂದ ಪಾರಾಗಲು ಜನರು ಮನೆಯಲ್ಲೊಂದು ಸಣ್ಣ ಮಣ್ಣಿನ ಮಡಿಕೆ ಇಟ್ಟುಕೊಳ್ಳುತ್ತಿದ್ದರು. ಈ ಮಡಿಕೆಯಲ್ಲಿ ತುಂಬಿಟ್ಟ ನೀರು ದೇಹವನ್ನು ತಂಪಾಗಿಸಿ ಹೊಸ ಚೈತನ್ಯ, ಉಲ್ಲಾಸ ತಂದುಕೊಡುತ್ತದೆ. ಆದ್ರೀಗ ಮಾರಣಾಂತಿಕ ರೋಗ ಕೊರೊನಾ ತಾಂಡವವಾಡುತ್ತಿರುವ ಕಾಲ. ಸೋಂಕು ಹರಡುವ ಭಯದಿಂದ ಜನರು ತಲೆ ತಿರುಗಿ ಬೀಳುವ ಬೇಸಗೆಯಲ್ಲೂ ಬಿಸಿ ನೀರನ್ನೇ ನೆಚ್ಚಿಕೊಂಡಿದ್ದಾರೆ. ಪರಿಣಾಮ, ಬಡವರ ಫ್ರಿಢ್ಜ್ ಎಂದೇ ಕರೆಯುವ ಮಣ್ಣಿನ ಮಡಿಕೆಗಳಿಗೆ ಬೇಡಿಕೆ ಇಲ್ಲದಂತಾಗಿದೆ. ಹೀಗಾಗಿ, ಮಡಿಕೆ ವ್ಯಾಪಾರಿಗಳು, ಕುಂಬಾರಿಕೆ ಕೆಲಸ ಮಾಡುವವರ ಬದುಕು ಮೂರಾಬಟ್ಟೆಯಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಆರ್ಭಟ ಹೇಳತೀರದು. ಹಿಂದೆಲ್ಲ ನಗರದಲ್ಲಿ ಮಣ್ಣಿನ ಮಡಿಕೆಗಳಿಗೆ ಒಳ್ಳೆಯ ಮಾರ್ಕೆಟ್ ಇರುತ್ತಿತ್ತು. ಆದ್ರೀಗ ಜನರು ಮನೆ ಬಿಟ್ಟು ಹೊರ ಬರುತ್ತಿಲ್ಲ. ಮಡಿಕೆ ಕೊಳ್ಳುವವರ ಸಂಖ್ಯೆ ಗಣನೀಯವಾಗಿ ಇಳಿದಿದೆ. ಕುಲಕಸುಬನ್ನೇ ನಂಬಿ ಜೀವನ ನಡೆಸುತ್ತಿದ್ದ ಕುಂಬಾರರು ದೈನಂದಿನ ಜೀವನ ಸಾಗಿಸಲು ಸಂಕಷ್ಟಪಡುತ್ತಿದ್ದಾರೆ.
ಮೊದಲೇ ಕಳೆದ ವರ್ಷದಿಂದ ಕೊರೊನಾ ಪರಿಣಾಮವಾಗಿ ಅಂದುಕೊಂಡಂತೆ ವ್ಯಾಪಾರವಿಲ್ಲ. ಇದೀಗ ಲಾಕ್ಡೌನ್ ಬೇರೆ. ಸರ್ಕಾರ ನಿಗದಿಪಡಿಸಿದ ವೇಳೆಯಲ್ಲಿ ಬಂದು ಮಡಿಕೆ ಕೊಳ್ಳುವವರ ಸಂಖ್ಯೆಯೂ ನಿರೀಕ್ಷೆಗೆ ತಕ್ಕಂತಿಲ್ಲ. ಕೊರೊನಾ ಬಂದ ಬಳಿಕವಂತೂ ಜೀವನ ನಿರ್ವಹಣೆಯೇ ಕಷ್ಟವಾಗಿದೆ ಅಂತಾರೆ ಕೊಪ್ಪಳ ಜಿಲ್ಲೆಯ ಕುಂಬಾರರು.
ಕೊರೊನಾ ಸೋಂಕು ತಗಲುವ ಭೀತಿಯಿಂದ ಜನರು ಬೇಸಿಗೆಯಲ್ಲೂ ಬಿಸಿನೀರನ್ನೇ ಹೆಚ್ಚಾಗಿ ಬಳಸೋದು ಸಾಮಾನ್ಯವಾಗಿದೆ. ಆದ್ರೆ ಮಡಿಕೆ ವ್ಯಾಪಾರಕ್ಕೆ ಬೇಸಗೆಯೇ ಪ್ರಶಸ್ತ ಕಾಲ. ಕೊರೊನಾ ಕಾರಣದಿಂದ ಜನರು ಮಡಿಕೆಗಳನ್ನು ಕೊಳ್ಳದೇ ತುಮಕೂರಿನಲ್ಲೂ ವ್ಯಾಪಾರಿಗರು ನಷ್ಟದಲ್ಲಿದ್ದಾರೆ.
ಇದನ್ನೂ ಓದಿ: ಬೇಡಿಕೆ ಕಳೆದುಕೊಂಡ ಬಡವರ 'ಫ್ರಿಡ್ಜ್'; ಕಳೆ ಕಳೆದುಕೊಂಡ ಕುಂಬಾರಣ್ಣನ ಬದುಕಿನ ಮಡಿಕೆಗಳು!
ಬೇಸಿಗೆಯಲ್ಲಿ ಉತ್ತಮ ಅದಾಯ ಪಡೆಯುತ್ತಿದ್ದ ಕುಂಬಾರರು ಹಾಗೂ ವ್ಯಾಪಾರಸ್ಥರಿಗೆ ಕೋವಿಡ್ ಎರಡನೇ ಅಲೆ ಆಘಾತ ನೀಡಿದೆ. ತಯಾರಿಸಿಟ್ಟ ಮಡಿಕೆ - ಗಡಿಗೆಗಳು ವ್ಯಾಪಾರವಾಗದೇ ಮೂಲೆ ಸೇರಿವೆ. ಇವೆಲ್ಲದರ ಮಧ್ಯೆ ಮುಂದೇನು? ಎಂಬ ಚಿಂತೆ ಈ ತಯಾರಕ, ವ್ಯಾಪಾರಿ ವರ್ಗದ್ದು.